ಬೆಂಗಳೂರು: ರಾಜ್ಯದ ಕಂದಾಯ ಭೂಮಿಗಳಲ್ಲಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಮಾರಾಟವಾಗದೆ ಉಳಿದಿರುವ ನಿವೇಶನಗಳಿಗೆ ‘ಬಿ’ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಮೇಲ್ಮನೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರ ನೀಡಿದ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದರು.
ಮನೆ ನಿರ್ಮಿಸಲಾಗಿರುವ ಮತ್ತು ಖಾತೆ ಬದಲಾವಣೆ ಆಗಿರುವ ನಿವೇಶನಗಳಿಂದ ಕಂದಾಯ ಸಂಗ್ರಹಿಸಲು ಬಿ ಖಾತೆ ನೀಡಲಾಗಿದೆ. ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಪಂಚಾಯತ್ ರಾಜ್ ನಿಯಮಗಳು, 2025ರ ನಿಯಮದ ಅನ್ವಯ ಸರಿಪಡಿಸಲು ಪುನರ್ ಪರಿಶೀಲನೆ ಮಾಡುವ ಭರವಸೆ ನೀಡಿದರು.
ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಜಮೀನಿನಲ್ಲಿ ನಿರ್ಮಿಸಿರುವ ಬಡಾವಣೆಗಳಲ್ಲಿದ್ದು, ಮಾರಾಟದ ಮೂಲಕ ಖಾತೆ ವರ್ಗಾವಣೆ ಆಗಿರುವ ನಿವೇಶನಗಳಿಗೆ ಬಿ ಖಾತೆ ನೀಡಲಾಗಿದೆ. ಅಂತಹ ನಿವೇಶನಗಳಿಗೆ ಬಿ ಖಾತೆ ಮಾಡಿಕೊಡಲು ಗಡವು ನೀಡಲಾಗಿತ್ತು. ಗಡವಿನೊಳಗೆ ಅರ್ಜಿ ಸಲ್ಲಿಸಿದವರಿಗೆ ಖಾತೆ ನೀಡಲಾಗಿದೆ. ಗಡುವಿನ ನಂತರ ಮಾರಾಟವಾದ ನಿವೇಶನಗಳಿಗೆ ಖಾತೆ ನೀಡಲು ಅವಕಾಶವಿಲ್ಲ ಎಂದರು.
ಕಾನೂನು ಪಾಲನೆಯನ್ನು ಬಿಲ್ಡರ್ ಮಾಡಿಲ್ಲ :
ಹತ್ತಾರು ವರ್ಷಗಳಿಂದ ಅಕ್ರಮ ಬಡಾವಣೆಗಳು ಮಾಡಿಕೊಂಡು ಬಂದಿದ್ದಾರೆ. ಇವುಗಳಿಗೆ ಪಂಚಾಯ್ತಿಯ ಪತ್ರಗಳು ಇರುತ್ತಿರಲ್ಲ. ಮನೆಯಲ್ಲಿ ಒಂದು ಪ್ರಿಂಟ್ ತೆಗೆದು ನೋಂದಣಿಯಾಗಿದೆ ಎಂದು ಹೇಳಿ ಮಾರಾಟ ಮಾಡುತ್ತಿದ್ದರು. ಆ ಬಡಾವಣೆ ಸೌಲಭ್ಯವನ್ನು ಸರ್ಕಾರ ಕೊಡಬೇಕಾಗಿತ್ತು. ಆದರೆ ಅಕ್ರಮ ಬಡಾವಣೆ ಮಾಡಿ ಬಿಲ್ಡರ್ ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಸರ್ಕಾರದ ಒಂದು ನಿಯಮವನ್ನು ಕೂಡ ಅಲ್ಲಿ ಪಾಲನೆ ಆಗುತ್ತಿರಲಿಲ್ಲ ಎಂದು ದೂರಿದರು. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಗೆ ಒಳಗಾಗುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಅಕ್ರಮ ಬಡವಾಣೆಗೆ ಕಡಿವಾಣ ಹಾಕಿದೆ. ನೂರಕ್ಕೆ 99ರಷ್ಟು ಭಾಗ ಅಕ್ರಮ ಬಡಾವಣೆ ನಿಲ್ಲಿಸಿದ್ದೇವೆ ಎಂದರು.
ಈಗಾಗಲೇ ಮಾರಾಟವಾಗದ ನಿವೇಶಗಳಿಗೆ ಅವಕಾಶ ನೀಡಿ ಎಂದು ನೀವು ಕೇಳುತ್ತಿದ್ದೀರಿ. ಕಾನೂನಿನಲ್ಲಿ ಅವಕಾಶವಿಲ್ಲ ಆದರೂ ಅರ್ದ ಮಾರಾಟವಾಗಿ ಇನ್ನರ್ಧ ಮಾರಾಟವಾಗದೇ ಇರುವ ನಿವೇಶನಗಳಿಗೂ ಅವಕಾಶ ನೀಡಿ ಎಂದು ಕೇಳುತ್ತಿದ್ದೀರಿ. ನಿವೇಶ ಮಾರಾಟವಾಗದೆ ಉಳಿದಿದ್ದರೆ ನಾಗರಿಕ ಬಳಕೆ ನಿವೇಶನ, ಉದ್ಯಾನಕ್ಕೆ ಜಾಗ ಬಿಟ್ಟು ಬಡಾವಣೆ ಅನುಮೋದನೆಗೆ ಅರ್ಜಿ ಸಲ್ಲಿಸಿದರೆ, ಖಾತೆ ಮಾಡಿಕೊಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು. ಆದರೆ ಅದು ಸಂಪೂರ್ಣವಾಗಿ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.



