ದೇಶೀಯ ಎಲ್ ಪಿಜಿ ಉತ್ಪಾದನೆ ಶೇ.೩೦ರಷ್ಟು ಹೆಚ್ಚಳ ಮಾಡಲಾಗಿದ್ದು, ಗ್ರಾಹಕರು ಅಡುಗೆ ಅನಿಲದ ಬಗ್ಗೆ ಆತಂಕಪಡುವುದು ಬೇಡ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಮಧ‍್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ವಿದೇಶಗಳಿಂದ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ಪ್ರಮಾಣ ಕುಸಿತದಿಂದ ದೇಶದೆಲ್ಲೆಡೆ ಅಡುಗೆ ಅನಿಲದ ಬೇಡಕೆ ಹೆಚ್ಚಾಗಿದ್ದು, ಹೋಟೆಲ್, ಪಿಜಿ ಸೇರಿದಂತೆ ವಿವಿಧ ಉದ್ಯಮಗಳ ಮೇಲೆ ಹೊಡೆತ ಬಿದ್ದಿದೆ. ಇದರಿಂದ ಜನರು ಗ್ಯಾಸ್ ಸಿಲಿಂಡರ್ ಗಾಗಿ ಮುಗಿಬಿದ್ದಿದ್ದಾರೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ದೇಶೀಯ ಮಟ್ಟದಲ್ಲಿ ಗ್ಯಾಸ್ ಸಿಲಿಂಡರ್ ಉತ್ಪಾದನೆಯನ್ನು ಶೇ.30ಷ್ಟು ಹೆಚ್ಚಿಸಿದೆ. ಇದರಿಂದ ದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಅಡುಗೆ ಅನಿಲ ಪೂರೈಕೆ ಆಗಲಿದೆ ಎಂದು ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಎಲ್ ಪಿಜಿ ಬೇಡಿಕೆ ಪ್ರತಿದಿನ 55.7 ಲಕ್ಷ ಬುಕ್ಕಿಂಗ್ ಆಗುತ್ತಿದ್ದವು. ಆದರೆ ಯುದ್ಧದ ಭೀತಿಯಿಂದಾಗಿ ಬೇಡಿಕೆ ಪ್ರಮಾಣ 77.7ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಜನರು ಸಿಲಿಂಡರ್ ಕೊರತೆಯ ಭೀತಿಗೆ ಒಳಗಾಗಿರುವುದು ಸ್ಪಷ್ಟವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ಸುಜಾತ ಶರ್ಮ ಹೇಳಿದ್ದಾರೆ.
ದೇಶದಲ್ಲಿ ಎಲ್ ಪಿಜಿ ಪೂರೈಕೆ ವಿದೇಶಗಳಿಂದ ಶೇ.60ರಷ್ಟು ಪೂರೈಕೆಯಾಗುತ್ತಿತ್ತು. ಇದರಿಂದ ಶೇ.90ರಷ್ಟು ಹರ್ಮುಜ್ ಜಲಸಂಧಿ ಮಾರ್ಗದ ಮೂಲಕ ಆಗಮಿಸುತ್ತಿತ್ತು. ಪ್ರಸ್ತುತ ಯುದ್ಧದಿಂದಾಗಿ ಇರಾನ್ ಈ ಜಲಸಂಧಿಯನ್ನು ಮುಚ್ಚಿದೆ.



