ವಾಷಿಂಗ್ಟನ್: ಹರ್ಮುಜ್ ಜಲಸಂಧಿ ಮುಕ್ತಗೊಳಿಸಲು ಮಿತ್ರರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮಾಡಿದ ಮನವಿಯನ್ನು ಎರಡು ರಾಷ್ಟ್ರಗಳು ತಿರಸ್ಕರಿಸಿವೆ.
ಇರಾನ್ ವಶದಲ್ಲಿರುವ ಹರ್ಮುಜ್ ಜಲಸಂಧಿಯನ್ನು ಮುಕ್ತೊಗೊಳಿಸಲು ನೌಕಾಪಡೆ ಒಕ್ಕೂಟ ರಾಷ್ಟ್ರಗಳು ಕೈ ಜೋಡಿಸಬೇಕು. ಹಾಗೂ ತಮ್ಮ ನೌಕಾಪಡೆ ಹಡಗುಗಳನ್ನು ಹರ್ಮುಜ್ ಬಳಿ ತರಬೇಕು ಎಂದು ಮನವಿ ಮಾಡಿದ್ದಾರೆ.
ಜಗತ್ತಿನ ತೈಲ ಸಾಗಾಟದ ಶೇ.20ರಷ್ಟು ಹರ್ಮುಜ್ ಜಲಸಂಧಿ ಮಾರ್ಗದಿಂದ ಸಾಗುತ್ತವೆ. ಈ ಮಾರ್ಗದಲ್ಲಿ ಸಂಚರಿಸುವುದರಿಂದ ವೆಚ್ಚ ಕಡಿತ ಹಾಗೂ ಸಮಯ ಉಳಿತಾಯ ಆಗುತ್ತದೆ.
ಇರಾನ್ ವಿರುದ್ಧದ ಯುದ್ಧದ 17ನೇ ದಿನಕ್ಕೆ ಕಾಲಿಟ್ಟಿದ್ದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಬಗೆಹರಿಯವ ಲಕ್ಷಣ ಕಾಣುತ್ತಿಲ್ಲ. ಇರಾನ್ ತಮಗೆ ಸಹಕಾರ ನೀಡಿದ ದೇಶಗಳ ಹಡುಗಳಿಗೆ ಮಾತ್ರ ಸಾಗಾಟಕ್ಕೆ ಅವಕಾಶ ನೀಡಿದ್ದು, ಉಳಿದ ದೇಶಗಳ ಹಡುಗಳನ್ನು ನಿರ್ಬಂಧಿಸಿದೆ.
ಜಗತ್ತಿನಲ್ಲಿ ತೈಲ ಹಾಗೂ ಎಲ್ ಪಿಜಿ ಕೊರತೆ ಕಾಡಲು ಆರಂಭಿಸಿದ್ದರಿಂದ ಅಮೆರಿಕ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 7 ರಾಷ್ಟ್ರಗಳು ಹರ್ಮುಜ್ ಜಲಸಂಧಿ ಇರಾನ್ ನಿಂದ ಮುಕ್ತಗೊಳಿಸಲು ನೆರವು ಯಾಚಿಸಿದೆ.
ಅಮೆರಿಕ ಸಹಕಾರ ಕೋರಿದ 7 ರಾಷ್ಟ್ರಗಳ ಹೆಸರು ಬಹಿರಂಗಪಡಿಸದೇ ಇದ್ದರೂ ಜಪಾನ್ ಹಾಗೂ ಆಸ್ಟ್ರೇಲಿಯಾ ನೌಕಾಪಡೆ ಒಕ್ಕೂಟ ರಚನೆಯಿಂದ ಹೊರಗುಳಿಯುವುದಾಗಿ ಘೋಷಿಸಿದೆ. ಈ ಮೂಲಕ ಟ್ರಂಪ್ ಗೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ.
ಖಾರ್ಗ್ ವಶಕ್ಕೆ ಸೇನೆ ರವಾನೆ
ಇರಾನ್ ಶೇ.90ರಷ್ಟು ತೈಲ ಉತ್ಪಾದನೆ ಮಾಡುವ ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿದ್ದ ಅಮೆರಿಕ ಇದೀಗ ಖಾರ್ಗ್ ದ್ವೀಪ ವಶಪಡಿಸಿಕೊಳ್ಳಲು ಸೇನೆ ರವಾನಿಸುವುದಾಗಿ ಘೋಷಿಸಿದೆ.
ಜಗತ್ತಿನ ಶೇ.20ರಷ್ಟು ತೈಲ ಉತ್ಪಾದಿಸುವ ಇರಾನ್ ನ ಹೃದಯ ಎಂದೇ ಕರೆಯಲಾಗುವ ಖಾರ್ಗ್ ದ್ವೀಪವೊಂದರಲ್ಲೇ ಶೇ.90ರಷ್ಟು ತೈಲ ಉತ್ಪಾದನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ದ್ವೀಪವನ್ನು ವಶಪಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ.
ದುಬೈ ವಿಮಾನ ನಿಲ್ದಾಣ ಬಂದ್
ಯುದ್ಧ 17ನೇ ದಿನಕ್ಕೆ ಕಾಲಿಟ್ಟಿದ್ದರೂ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮುಂದುವರಿಸಿದೆ. ಅಮೆರಿಕ ನೆಲೆಗಳಿಗೆ ಆಶ್ರಯ ನೀಡಿದರೆ ದಾಳಿ ಮಾಡುವುದಾಗಿ ರೊಮೇನಿಯಾಗೆ ಇರಾನ್ ಎಚ್ಚರಿಕೆ ನೀಡಿದೆ.
ದುಬೈನ ವಿಮಾ ನಿಲ್ದಾಣದ ಮೇಲೆ ಇರಾನ್ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿದ್ದರಿಂದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಂಪೂರ್ಣ ಬಂದ್ ಮಾಡಲಾಗಿದೆ. ಇದೇ ವೇಳೆ ಇರಾಕ್ ನಲ್ಲಿರುವ ಅಮೆರಿಕದ ವಿಕ್ಟೋರಿಯಾ ನೆಲೆಗಳ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದೆ.
ಮತ್ತೊಂದೆಡೆ ಇರಾನ್ ರಾಜಧಾನಿ ಟೆಹರಾನ್, ಶಿರಾಜ್, ತಬ್ರಿಜ್ ನಗರಗಳ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಇರಾನ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಹಾನಿ ಮಾಡಿದೆ. ಆದರೆ ದಾಳಿ- ಪ್ರತಿದಾಳಿಯಲ್ಲಿ ಸಂಭವಿಸಿದ ಸಾವುನೋವಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.



