Friday, May 15, 2026
Google search engine
Homeರಾಜ್ಯದಾವಣಗೆರೆಗೆ ಸಮರ್ಥ್‌, ಬಾಗಲಕೋಟೆಗೆ ಉಮೇಶ್‌ ಮೇಟಿಗೆ ಟಿಕೆಟ್:‌ ಕಾಂಗ್ರೆಸ್‌ ಅಧಿಕೃತ ಘೋಷಣೆ‌

ದಾವಣಗೆರೆಗೆ ಸಮರ್ಥ್‌, ಬಾಗಲಕೋಟೆಗೆ ಉಮೇಶ್‌ ಮೇಟಿಗೆ ಟಿಕೆಟ್:‌ ಕಾಂಗ್ರೆಸ್‌ ಅಧಿಕೃತ ಘೋಷಣೆ‌

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌ ಅಧಿಕೃತವಾಗಿ ಘೋಷಿಸುವ ಮೂಲಕ ಟಿಕೆಟ್‌ ಹಂಚಿಕೆ ಗೊಂದಲ ಬಗೆಹರಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸಮರ್ಥ್​ ಶಾಮನೂರು ಹಾಗೂ ಬಾಗಲಕೋಟೆ ಅಭ್ಯರ್ಥಿಯಾಗಿ ಉಮೇಶ ಹುಲ್ಲಪ್ಪ ಮೇಟಿ ಹೆಸರನ್ನು ಪ್ರಕಟಿಸಿದೆ. ತೀವ್ರ ಪ್ರತಿರೋಧ, ಸಾಕಷ್ಟು ಲಾಬಿ, ಒತ್ತಡ, ವಿರೋಧ, ಗೊಂದಲ, ಸರಣಿ ಸಭೆಗಳ ಬಳಿಕ ಎರಡೂ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೇ ಮಣೆ ಹಾಕಿದೆ.
ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಹಾಗೂ ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿತ್ತು.

ಆರಂಭದಿಂದಲೂ ಬಹುತೇಕ ಕುಟುಂಬ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್​ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕ್ಷೇತ್ರದಲ್ಲಿ ನಿರ್ಣಾಯಕ ಸಮುದಾಯವಾಗಿರುವ ಮುಸ್ಲಿಂರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯಲಾಗಿತ್ತು.

ಈ ಬಗ್ಗೆ ಸಚಿವ ಜಮೀರ್ ಕೂಡ ತೀವ್ರ ಒತ್ತಡ ಹೇರಿದ್ದರು. ಅತ್ತ, ಕ್ಷೇತ್ರದಲ್ಲಿ ನಡೆದ ಸಭೆಯಲ್ಲೂ ಮುಸ್ಲಿಂ ಸಮುದಾಯಕ್ಕೇ ಟಿಕೆಟ್ ನೀಡಬೇಕು ಎಂದು ಚುನಾವಣಾ ಉಸ್ತುವಾರಿ ನಾಯಕರ ಮುಂದೆ ಬಲವಾದ ಬೇಡಿಕೆ ಇಟ್ಟಿದ್ದರು‌. ಒಂದು ವೇಳೆ ಸಮಾದಾಯಕ್ಕೆ ಟಿಕೆಟ್ ನೀಡದೇ ಇದ್ದರೆ, ಮತ ಹಾಕುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಗ, ದಿವಂಗತ ಶಾಮನೂರು ಮೊಮ್ಮಗ ಸಮರ್ಥ್ ಟಿಕೆಟ್​ ಘೋಷಣೆಗೂ ಮುನ್ನ ಶುಕ್ರವಾರವೇ(ಮಾ.20) ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಳಿಕ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕೂಡ ಉಮೇದುವಾರಿಕೆ ಸಲ್ಲಿಸಿ ಕುತೂಹಲ ಕೆರಳಿಸಿದ್ದರು.

ಶನಿವಾರ ಸಿಎಂ ಸಿದ್ದರಾಮಯ್ಯ ಮುಸ್ಲಿಂ ನಾಯಕರಾದ ಸಚಿವ ಜಮೀರ್ ಅಹಮದ್ ಜೊತೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ಸಿಎಂರನ್ನು ಭೇಟಿಯಾಗಿ ಚರ್ಚಿಸಿದ್ದರು.

ಇದೀಗ ಹೈಕಮಾಂಡ್ ಸಮರ್ಥ್​​ ಶಾಮನೂರುಗೆ ಟಿಕೆಟ್ ಘೋಷಿಸಿದೆ. ಮುಸ್ಲಿಂ ಸಮುದಾಯದ ನಡೆ ಏನಿರಲಿದೆ, ಹೈಕಮಾಂಡ್ ಯಾವ ರೀತಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ ಎಂಬುದು ಕುತೂಹಲ ಕೆರಳಿಸಿದೆ.

ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಿಗೆ ರಾಜ್ಯಸಭೆ ಹಾಗೂ ಲೋಕಸಭೆಗೆ ಆದ್ಯತೆ ಮೇರೆಗೆ ಟಿಕೆಟ್‌ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಕಾಂಗ್ರೆಸ್‌ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಸುರ್ಜೆವಾಲಾ ನೇತೃತ್ವದಲ್ಲಿ ರಾಜೀ ಸಂಧಾನ ಯಶಸ್ವಿಯಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments