ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಅಕ್ಕ ಮತ್ತು ತಮ್ಮನನ್ನು 16 ವರ್ಷದ ಬಾಲಕ ಚಾಕುವಿನಿಂದ ಇರಿದು ಕೊಂದಿದ್ದು, ಸುದ್ದಿ ತಿಳಿದ ಅಕ್ಕನ ಮಗಳು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪೀಣ್ಯದ ಹೆಚ್ ಎಂಟಿ ಲೇಔಟ್ ನಲ್ಲಿ ಗುರುವಾರ ಬೆಳಿಗ್ಗೆ ಡಬಲ್ ಮರ್ಡರ್ ನಡೆದಿದ್ದು, ಪೀಣ್ಯ ನಿವಾಸಿ ಯಮುನಾ (36) ಮತ್ತು ತಮ್ಮ ಸುದೀಪ್ (34) ಕೊಲೆಯಾಗಿದ್ದಾರೆ. ಯಮುನಾ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಕೊಲೆ ಮಾಡಿದ 16 ವರ್ಷದ ಮಲ್ಲೇ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ತಿಗಳಪಾಳ್ಯದಲ್ಲಿ ವಾಸವಾಗಿದ್ದ ಮಲ್ಲೇಗೌಡ ನೆರೆ ಮನೆಯ ಛಾಯಾ ಎಂಬ ಮಹಿಳೆಯ ಜೊತೆ ಸಲುಗೆಯಿದ್ದ ಇದ್ದ. ಛಾಯಾ ಬಾಡಿಗೆ ಮನೆ ಬದಲಿಸಿಕೊಂಡು ಬೇರೆ ಕಡೆ ಹೋಗಿದ್ದರೂ ಆಗಾಗ ಇಬ್ಬರೂ ಭೇಟಿ ಆಗುತ್ತಿದ್ದು, ಇತ್ತೀಚೆಗೆ ಮಲ್ಲೇಗೌಡ ಮನೆಗೆ ಬಂದಿದ್ದಾರೆ.
ಮಲ್ಲೇಗೌಡ ನಡವಳಿಕೆ ಬಗ್ಗೆ ಅಸಮಾಧಾನಗೊಂಡ ಅಕ್ಕ ಮತ್ತು ತಮ್ಮ ಪ್ರಶ್ನಿಸಲು ಹೋಗಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಮಲ್ಲೇಗೌಡ ಚಾಕುವಿನಿಂದ ಇಬ್ಬರ ಮೇಲೂ ದಾಳಿ ಮಾಡಿ ಕೊಲೆಗೈದಿದ್ದಾನೆ.
ತನ್ನ ತಾಯಿ ಯಮುನಾ ಹಾಗೂ ಮಾವ ಸುದೀಪ್ ಇಬ್ಬರೂ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯಮುನಾ ಅವರ ಪುತ್ರಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಮನೆಯಲ್ಲಿದ್ದ ಆಸಿಡ್ ಕುಡಿದು ಆಕೆಯೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



