ಬೆಂಗಳೂರು: ಸುಡು ಬಿಸಿಲಿನ ಜೊತೆಗೆ ಎಲ್ ಪಿಜಿ ಕೊರತೆಯಿಂದಾಗಿ ರಾಜ್ಯದಲ್ಲಿ ಕರೆಂಟ್ ಸ್ಟವ್ ಬಳಕೆ ಪ್ರಮಾಣ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಸರಾಸರಿ ಬಳಕೆಯನ್ನೂ ಮೀರಿ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ.
ಕಳೆದ ಮೂರು ವಾರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಗಗನಕ್ಕೇರಿದೆ. ಬಿರು ಬೇಸಿಗೆ ಧಗೆ ಜೊತೆಗೆ ಮಧ್ಯಪ್ರಾಚ್ಯ ಯುದ್ಧದಿಂದ ಎಲ್ ಪಿಜಿ ಕೊರತೆ ಹಾಗೂ ಬೆಲೆ ಏರಿಕೆಯಿಂದಾಗಿ ಜನರು ಮಾತ್ರವಲ್ಲದೇ ವಾಣಿಜ್ಯ ಬಳಕೆದಾರರು ಕೂಡ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆ ಪ್ರಮಾಣದ ಮೇಲೆ ಇಂಧನ ಇಲಾಖೆ ತೀವ್ರ ನಿಗಾ ಇರಿಸಿದೆ. ಅಲ್ಲದೇ ವಿದ್ಯುತ್ ಸಂಗ್ರಹ ಹಾಗೂ ಸರಬರಾಜು ಕಡೆ ಗಮನ ಹರಿಸಲಾಗುತ್ತಿದೆ.
ಸಾಮಾನ್ಯವಾಗಿ ಏಪ್ರಿಲ್, ಮೇನಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಉಲ್ಬಣಗೊಳ್ಳುತ್ತದೆ. ಬೇಸಿಗೆಯಲ್ಲಿ ತಾಪಮಾನ ವೃದ್ಧಿಯಾಗುತ್ತಿರುವುದರಿಂದ ಎಸಿ, ಕೂಲರ್ ಬಳಕೆ ಹೆಚ್ಚಾಗುತ್ತದೆ. ಇದರ ಜೊತೆಗೆ ಕೃಷಿ ಪಂಪ್ ಸೆಟ್ ಬಳಕೆ ಮಾಡಲಾಗುತ್ತದೆ. ಇದರಿಂದ ಪ್ರತೀ ಬೇಸಿಗೆಯಲ್ಲಿ ವಿದ್ಯುತ್ ಪ್ರಮಾಣ ಹೆಚ್ಚಾಗಿರುತ್ತದೆ.
ಈ ಬಾರಿ ಬಿಸಿಲಿನ ಜೊತೆಗೆ ಮಧ್ಯಪ್ರಾಚ್ಯ ಯುದ್ದದಿಂದ ಎಲ್‌ಪಿಜಿ ಕೊರತೆ ಎದುರಾಗಿದ್ದು, ಬಹುತೇಕ ಹೋಟೆಲ್ಗಳು, ರೆಸ್ಟೋರೆಂಟ್ಗಳು ಇಂಡಕ್ಷನ್, ವಿದ್ಯುತ್ ಉಪಕರಣಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ವಿದ್ಯುತ್ ಬೇಡಿಕೆಯಲ್ಲಿ ಎಷ್ಟು ಹೆಚ್ಚಳ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಮಾರ್ಚ್ ತಿಂಗಳಲ್ಲಿ 18,000 ಮೆ.ವಾ. ಸಮೀಪಕ್ಕೆ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ. ಇಂಧನ ಇಲಾಖೆಯ ಅಂಕಿ-ಅಂಶದಂತೆ ಜನವರಿ ತಿಂಗಳಲ್ಲಿ ರಾಜ್ಯದಲ್ಲಿ 9,248 ಎಂ.ಯು ವಿದ್ಯುತ್ ಬಳಕೆಯಾಗಿದೆ. ಸರಾಸರಿ 298 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಅದೇ ಫೆಬ್ರವರಿ ತಿಂಗಳಲ್ಲಿ 9,151 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 327 ಎಂ.ಯು. ವಿದ್ಯುತ್ ಬಳಸಲಾಗಿದೆ.
ಮಾರ್ಚ್ ತಿಂಗಳಲ್ಲಿ ವಿದ್ಯುತ್ ಬಳಕೆ ಮತ್ತಷ್ಟು ಹೆಚ್ಚಿದೆ. ಈ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 10,378 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 335 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಈವರೆಗೆ 1,649 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 330 ಎಂ.ಯು. ವಿದ್ಯುತ್ ಬಳಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಸರಾಸರಿ 311 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿತ್ತು. ಈ ಬಾರಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸರಾಸರಿ ವಿದ್ಯುತ್ ಬಳಕೆಯಲ್ಲಿ 19 ಎಂ.ಯು. ನಷ್ಟು ಹೆಚ್ಚಳವಾಗಿದೆ.
2 ವಾರದಲ್ಲಿ ಭಾರೀ ಹೆಚ್ಚಳ
ಕಳೆದ ಎರಡು ವಾರದ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಬಳಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಾರ್ಚ್ 26ರಂದು 17,000 ಮೆ.ವಾ. ವಿದ್ಯುತ್ ಬೇಡಿಕೆ ಇದ್ದು, 336 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಅದೇ ಮಾ.27ರಂದು 17,826 ಮೆ.ವಾ. ವಿದ್ಯುತ್ ಬೇಡಿಕೆ ಕಂಡಿದ್ದು, 343 ಎಂ.ಯು. ಬಳಕೆಯಾಗಿದೆ. ಮಾ.28ರಂದು 17,705 ಮೆ.ವಾ. ವಿದ್ಯುತ್ ಬೇಡಿಕೆ ಬಂದಿದ್ದು, ಅಂದು 337 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಮಾ.30ರಂದು 16,866 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 334 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಅದೇ ಮಾ.31ರಂದು 17,175 ಮೆ.ವಾ. ವಿದ್ಯುತ್ ಬೇಡಿಕೆ ಬಂದಿತ್ತು. ಅಂದು ಒಟ್ಟು 337 ಎಂ.ಯು. ವಿದ್ಯುತ್ ಬಳಕೆ ಆಗಿತ್ತು.
ಏಪ್ರಿಲ್ 1 ರಂದು 16,724 ಮೆ. ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 332 ಎಂ.ಯು. ಬಳಕೆ ಮಾಡಲಾಗಿದೆ. ಏ.2ರಂದು 17,359 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 339 ಎಂ.ಯು. ಬಳಕೆ ಆಗಿದೆ. ಏ.3ರಂದು 17,192 ಮೆ.ವಾ. ವಿದ್ಯುತ್ ಬೇಡಿಕೆ ಬಂದಿದ್ದು, 334 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಇನ್ನು ಏ.4ರಂದು ರಾಜ್ಯದಲ್ಲಿ 16,745 ಮೆ.ವಾ. ಬೇಡಿಕೆ ಬಂದಿದ್ದು, 334 ಬಳಕೆ ಆಗಿದೆ.
ವಿದ್ಯುತ್ ಬಳಕೆ ಮೇಲೆ ನಿಗಾ:
ಎಲ್‌ಪಿಜಿ ಕೊರತೆಯಿಂದ ವಿದ್ಯುತ್ ಬಳಕೆಯಲ್ಲಿ ತೀವ್ರ ಹೆಚ್ಚಳವಾಗುವ ಸಾಧ್ಯತೆ ಮೇಲೆ ಇಂಧನ ಇಲಾಖೆ ನಿಕಟವಾಗಿ ನಿಗಾ ವಹಿಸುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಕೊರತೆ ಇಲ್ಲ. ಯಥೇಚ್ಛ ವಿದ್ಯುತ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಬೇಡಿಕೆ ಹೆಚ್ಚಳವನ್ನು ನಿಭಾಯಿಸಲು ಇಲಾಖೆ ಪೂರ್ವ ತಯಾರಿ ನಡೆಸಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಪಿಸಿಎಲ್ ತನ್ನ ಉಷ್ಣ ವಿದ್ಯುತ್ ಘಟಕಗಳಿಂದ ಸುಮಾರು 5000 ಮೆ. ವ್ಯಾಟ್ಗೂ ಅಧಿಕ ವಿದ್ಯುತ್ ಉತ್ಪಾದಿಸುತ್ತಿದೆ. ಉಡುಪಿ ವಿದ್ಯುತ್ ಕಾರ್ಪೊರೇಷನ್ನಿಂದ ಸುಮಾರು 1000 ಮೆ.ವಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸೋಲಾರ್ ಘಟಕಗಳಿಂದ ಸುಮಾರು 7,500 ಮೆ.ವಾ. ವಿದ್ಯುತ್ ಪೂರೈಕೆಯಾಗುತ್ತಿದೆ. ಬೆಳಗಿನ ಅವಧಿಯ ವಿದ್ಯುತ್ ಬೇಡಿಕೆಯನ್ನು ಸೋಲಾರ್ ಘಟಕದಿಂದ ಈಡೇರಿಸುತ್ತಿದ್ದರೆ, ರಾತ್ರಿಯ ಬೇಡಿಕೆಯನ್ನು ಉಷ್ಣ ವಿದ್ಯುತ್ ಸ್ಥಾವರಗಳಿಂದ ಪೂರೈಸಲಾಗುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಸುಮಾರು 3,000 ಮೆ. ವಾ. ವಿದ್ಯುತ್ ಜಲ ವಿದ್ಯುತ್ ಘಟಕಗಳಿಂದ ಉತ್ಪಾದನೆಯಾಗುತ್ತಿದೆ. ಕೇಂದ್ರ ಉತ್ಪಾದನಾ ಕೇಂದ್ರಗಳಿಂದ ಸರಿ ಸುಮಾರು 4,000 ಮೆ.ವಾ. ವಿದ್ಯುತ್ ನಿತ್ಯ ಪೂರೈಕೆಯಾಗುತ್ತಿದೆ. ವಿವಿಧ ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳ ಜೊತೆ ವಿದ್ಯುತ್ ಖರೀದಿ ಒಪ್ಪಂದದ (ಪಿಪಿಎ) ಮೂಲಕ 1000 ಮೆ.ವಾ ವಿದ್ಯುತ್ ರಾಜ್ಯ ಗ್ರಿಡ್ಗೆ ಸೇರ್ಪಡೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
‘ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಸುಮಾರು 8,000 ಮೆ. ವಾ ಆಸುಪಾಸಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ, ಬಳಕೆ ಉಲ್ಬಣವಾಗುತ್ತದೆ. ಎಲ್‌ಪಿಜಿ ಕೊರತೆಯಿಂದ ವಿದ್ಯುತ್ ಬಳಕೆ ಹೆಚ್ಚಳವಾಗುತ್ತಿರುವ ಬಗ್ಗೆ ಸ್ಪಷ್ಟತೆ ಇಲ್ಲ. ನಾವು ಕೆಲ ದಿನಗಳಿಂದ ವಿದ್ಯುತ್ ಬಳಕೆ ಹೆಚ್ಚಳದ ಅಂಕಿ-ಅಂಶವನ್ನು ಗಮನಿಸುತ್ತಿದ್ದೇವೆ. ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ಇದರಲ್ಲಿ ಎಲ್‌ಪಿಜಿ ಕೊರತೆಯ ಅಂಶ ಎಷ್ಟಿದೆ ಅನ್ನೋದು ಗೊತ್ತಿಲ್ಲ. ಒಟ್ಟು ರಾಜ್ಯದ ವಿದ್ಯುತ್ ಬೇಡಿಕೆ ಮತ್ತು ಬಳಕೆಯಲ್ಲಿ ಬೆಸ್ಕಾಂ ಪಾಲು ಸುಮಾರು 50% ಇದೆ. ಎಲ್‌ಪಿಜಿ ಕೊರತೆಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಿಗೆ ವಿದ್ಯುತ್ ಬಳಕೆ ಹೆಚ್ಚಳವಾಗುವ ಸಾಧ್ಯತೆ ಇಲ್ಲ’ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.



