ಬೆಂಗಳೂರು: ಸುಮಾರು 14 ಲಕ್ಷ ಮಂದಿ ಅಕ್ರಮ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಯುತ್ತಿದ್ದು, ಹಂತ ಹಂತವಾಗಿ ತೆಗೆದುಹಾಕಲಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನಧಿಕೃತ ಬಿಪಿಎಲ್ ಕಾರ್ಡ್‌ಗಳಿವೆ ಎಂಬ ವರದಿ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದರು.
ಮಾರ್ಗಸೂಚಿ ಮೀರಿದ ಎಪಿಎಲ್ನವರು 7 ಲಕ್ಷ ಕಾರ್ಡ್ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಅಂತ ವರದಿ ಇದೆ. ಅದನ್ನು ಪರಿಷ್ಕರಿಸುತ್ತಿದ್ದೇವೆ. ಸುಮಾರು 14 ಲಕ್ಷ ಮಂದಿ ಎಪಿಎಲ್ನಲ್ಲಿ ಇರಬೇಕಾದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂದರು.
ನಿಜವಾಗಲೂ ಬಿಪಿಎಲ್ ಕಾರ್ಡ್ಗೆ ಯಾರು ಅರ್ಹರಿದ್ದಾರೋ ಅವರ ಹೆಸರು ಡಿಲೀಟ್ ಆಗಲ್ಲ. ಡಿಲೀಟ್ ಆಗಿದ್ದರೆ, ತಹಶೀಲ್ದಾರ್ಗೆ ಅರ್ಜಿ ಹಾಕಬೇಕಿದ್ದು, ಮತ್ತೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ. ಎಪಿಎಲ್ ಕಾರ್ಡ್ ಇರುವವರಿಗೆ ಸದ್ಯಕ್ಕೆ ನಾವೇನೂ ಮಾಡ್ತಾ ಇಲ್ಲ. ಬಿಪಿಎಲ್ನಲ್ಲಿ ಸಾಕಷ್ಟು ಜನ ಎಪಿಎಲ್ನವರು ಇದ್ದಾರೆ. ಬಿಪಿಎಲ್ ಕಾರ್ಡ್ ಮಿಸ್ ಆಗಿದ್ರೆ ಅಂಥವರಿಗೆ ಕೊಡುತ್ತಿದ್ದೇವೆ. ಬಿಪಿಎಲ್ ಗೆ ಯಾರೂ ಅರ್ಹರಲ್ಲವೋ ಅವರು ಎಪಿಎಲ್ಗೆ ಹೋಗ್ತಾರೆ ಎಂದು ಸ್ಪಷ್ಟಪಡಿಸಿದರು.
ಎಲ್ಪಿಜಿ ಸಮಸ್ಯೆ ಕುರಿತು ಇಂದು ಸಭೆ
ರಾಜ್ಯದಲ್ಲಿ ಮುಂದುವರೆದ ಎಲ್ ಪಿಜಿ ಸಮಸ್ಯೆ ವಿಚಾರವಾಗಿ ಮಾತನಾಡಿ, ಶುಕ್ರವಾರ ಸಭೆ ಕರೆದಿದ್ದೇನೆ. ಅವರೆಲ್ಲ ವಿವರ ತಗೊಂಡು ಬರ್ತಾರೆ. ಆಟೋ ಓಡಿಸುವವರ ಜೀವನ ಗ್ಯಾಸ್ ಮೇಲೆ ಅವಲಂಬಿಸಿದೆ. ಅವರಿಗೆ ಅನಿವಾರ್ಯವಾಗಿ ಗ್ಯಾಸ್ ಕೊಡಬೇಕಾಗುತ್ತದೆ. ನಾನೂ ಕೂಡಾ ಒತ್ತಾಯ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಆದ್ಯತೆಯ ಆಧಾರದ ಮೇಲೆ ಗ್ಯಾಸ್ ಕೊಡಬೇಕು ಅಂತ ಮನವಿ ಮಾಡಿದ್ದೇವೆ. ಅದಕ್ಕೆ ಏನು ರಿಪ್ಲೈ ಬರುತ್ತೋ ಕಾದು ನೋಡಿ ಮಾತನಾಡುತ್ತೇನೆ ಎಂದರು.
ಬ್ಲ್ಯಾಕ್ ಮಾರ್ಕೆಟ್ನಲ್ಲಿ ಗ್ಯಾಸ್ ಸಿಲಿಂಡರ್ ಹೆಚ್ಚು ರೇಟ್ಗೆ ಮಾರಾಟ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಪೊಲೀಸ್ ಕಮಿಷನರ್ಗೆ ಹೇಳಿ ಬಂದೋಬಸ್ತ್ ಮಾಡೋಕೆ ಹೇಳುತ್ತೇನೆ. ನಮ್ಮ ಇಲಾಖೆಯವರು ರೇಡ್ ಮಾಡಬೇಕು. ಅದಕ್ಕಾಗಿ ಮೌಲ್ಯಮಾಪನ ಇಲಾಖೆ ಇದೆ. ನಾಳೆ ಅವರನ್ನು ಮೀಟಿಂಗ್ಗೆ ಕರೆದಿದ್ದೇನೆ. ಇಲಾಖೆ ಮುಖ್ಯಸ್ಥರನ್ನು ಕರೆದಿದ್ದೇನೆ. ಆಯಿಲ್ ಕಾರ್ಪೊರೇಷನ್ ಅವರನ್ನೂ ಕರೆದಿದ್ದೇನೆ. ಕುಳಿತು ಮಾತನಾಡಿ ಪರಿಹಾರ ಹುಡುಕಬೇಕು. ಆಯಿಲ್ ಕಾರ್ಪೊರೇಷನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಏನು ವರದಿ ತರುತ್ತಾರೋ ನೋಡಿ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲೇ ಕೊರತೆ ಹೆಚ್ಚು
ಅಕ್ಕಪಕ್ಕದ ರಾಜ್ಯಗಳಲ್ಲಿ ಗ್ಯಾಸ್ಗೆ ಇಷ್ಟೊಂದು ಕೊರತೆ ಕಾಣುತ್ತಿಲ್ಲ. ನಮ್ಮಲ್ಲಿ ಕೊರತೆ ಇದೆ. ಮಲತಾಯಿ ಧೋರಣೆ ಆಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರೇ ಹೀಗೆ ಮಾಡಿದ್ದಾರೆ. ಅವರು ರಾಜಕೀಯವಾಗಿ ತಾರತಮ್ಯ ಮಾಡ್ತಿದ್ದಾರೆ. ನಮ್ಮದು ಅಭಿವೃದ್ಧಿಯ ಪಥದಲ್ಲಿರುವ ರಾಜ್ಯ. ನಮ್ಮ ನಗರದಲ್ಲಿ ಹೊರ ರಾಜ್ಯದವರು ಹೆಚ್ಚಿದ್ದಾರೆ. ಅವರು ಹೊಟೇಲ್‌ಗಳನ್ನು ಅವಲಂಬಿಸಿದ್ದಾರೆ ಎಂದರು.
ಸರಿಯಾಗಿ ಗ್ಯಾಸ್ ಕೊಡದಿದ್ದರೆ, ಅವರೆಲ್ಲಿ ಹೋಗಬೇಕು?. ಇದನ್ನು ಮುಖ್ಯವಾಗಿ ಪರಿಗಣಿಸಿ ನಮಗೆ ಗ್ಯಾಸ್ ಕೊಡಬೇಕಾಗಿತ್ತು. ಕೊಟ್ಟಿಲ್ಲ. ಅದಕ್ಕೆ ಇದನ್ನು ಮಲತಾಯಿ ಧೋರಣೆ ಅಂತ ಹೇಳುತ್ತೇನೆ. ನಮ್ಮ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಆಟೋ ಚಾಲಕರು ಗ್ಯಾಸ್ ಸಿಗದಿದ್ದಕ್ಕೆ ರಾಜ್ಯ ಸರ್ಕಾರದ ಮೇಲೆ ಆಕ್ರೋಶಗೊಂಡ ವಿಚಾರವಾಗಿ, ಇದರಲ್ಲಿ ರಾಜ್ಯ ಸರ್ಕಾರದ್ದು ಏನೂ ಪಾತ್ರ ಇಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಎಲ್ಲವೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟದ್ದು. ಏನಾದರೂ ಅದಕ್ಕೆ ಅವರೇ ಹೊಣೆ. ನಮ್ಮ ಪಾತ್ರ ಏನೂ ಇಲ್ಲ. ನಾವು ಕಾಳಸಂತೆಗೆ ಹೋಗದಂತೆ, ಏಜೆನ್ಸಿಗಳು ಸರಿಯಾಗಿ ವಿತರಣೆ ಮಾಡದಿದ್ದರೆ, ಅಂತಹ ವಿಚಾರಗಳನ್ನು ನೋಡಬೇಕಾಗುತ್ತದೆ. ಗೃಹ ಸಚಿವರ ಜೊತೆ ಮಾತನಾಡಿ ಬಂದೋಬಸ್ತ್ ಮಾಡುತ್ತೇವೆ ಎಂದರು.



