ಟೆಹರಾನ್/ವಾಷಿಂಗ್ಟನ್: ಎರಡು ವಾರಗಳ ಕದನ ವಿರಾಮ ಘೋಷಣೆ ಬೆನ್ನಲ್ಲೇ ಅಮೆರಿಕ ಮತ್ತು ಇರಾನ್ ಪರಸ್ಪರ ಎಚ್ಚರಿಕೆ ಸಂದೇಶವನ್ನು ರವಾನಿಸಿವೆ. ಈ ಮೂಲಕ ಮಧ್ಯಪ್ರಾಚ್ಯ ಬಿಕ್ಕಟ್ಟು ಕುರಿತ ಬೆಳವಣಿಗೆ ಕುತೂಹಲ ಮೂಡಿಸಿವೆ.
ಕದನ ವಿರಾಮ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಂತಿಮ ಒಪ್ಪಂದ ಆಗುವವರೆಗೂ ನಾವು ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ. ಷರತ್ತಿಗೆ ಒಪ್ಪದೇ ಇದ್ದರೆ ಇನ್ನಷ್ಟು ಭೀಕರ ದಾಳಿ ನಡೆಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು ಮತ್ತು ಪರಮಾಣು ಸ್ಥಾವರ ಚಟುವಟಿಕೆ ನಿಲ್ಲಿಸಬೇಕು ಎಂದು ಟ್ರಂಪ್ ಮತ್ತೊಮ್ಮೆ ಇರಾನ್ ಗೆ ಸೂಚಿಸಿದ್ದಾರೆ.
ಇದೇ ವೇಳೆ ಕದನ ವಿರಾಮ ಕುರಿತು ಮಾಡಿಕೊಂಡ ಒಪ್ಪಂದದಲ್ಲಿ ಅಮೆರಿಕ 3 ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಇರಾನ್ ದೂರಿದೆ.
ಇರಾನ್ ಸಂಸತ್ ವಕ್ತಾರ ಎಂಬಿ ಗಾಲೀಫ್ ಹೇಳಿಕೆ ಬಿಡುಗಡೆ ಮಾಡಿದ್ದು, ಕದನ ವಿರಾಮದ ವೇಳೆ ಮಾಡಿಕೊಂಡ ಒಪ್ಪಂದಗಳಲ್ಲಿ ಮೂರು ಷರತ್ತುಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸ್ಪಷ್ಟವಾಗಿ 10 ಷರತ್ತುಗಳನ್ನು ಕದನ ವಿರಾಮದ ವೇಳೆ ಮುಂದಿಟ್ಟಿದ್ದಾರೆ. ಇದರಲ್ಲಿ ಕದನ ವಿರಾಮ ಘೋಷಣೆ ಆಗುತ್ತಿದ್ದಂತೆ ಲೆಬೆನಾನ್ ಸೇರಿದಂತೆ ಎಲ್ಲಾ ಪ್ರದೇಶಗಳ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸುವುದು ಆಗಿತ್ತು. ಆದರೆ ಲೆಬೆನಾನ್ ಸೇರಿದಂತೆ ಹಲವು ಕಡೆ ದಾಳಿ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ವಾಯು ಪ್ರದೇಶದಲ್ಲಿ ಹಾರಾಡುತ್ತಿದ್ದ ಡ್ರೋಣ್ ಗಳನ್ನು ಹೊಡೆದುರುಳಿಸುವ ಮೂಲಕ ವಾಯುನೆಲೆಯಲ್ಲಿ ಅತಿಕ್ರಮ ಪ್ರವೇಶ ಮಾಡುವ ಮೂಲಕ ಮತ್ತೊಂದು ಷರತ್ತುಗಳನ್ನು ಉಲ್ಲಂಘಿಸಲಾಗಿದೆ.
6ನೇ ಷತ್ತು ಆಗಿದ್ದ ಇರಾನ್ ಪುನರ್ ನಿರ್ಮಾಣ ಕುರಿತ ಬೇಡಿಕೆ ಈಡೇರಲು ಅವಕಾಶ ನೀಡದೇ ದಾಳಿ ಮಾಡಿರುವುದು ಮೂರನೇ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ಇಸ್ಲಮಾಬಾದ್ ನಲ್ಲಿ ಕದನ ವಿರಾಮದ ನಂತರ ಮಾತುಕತೆ ನಡೆಸಲು ಪ್ರಯತ್ನಗಳು ನಡೆದಿವೆ. ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಮಾತುಕತೆ ವೇಳೆ ಹಲವು ಷರತ್ತುಗಳು ಹಾಗೂ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.



