ಇಸ್ಲಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇರಾನ್ ಮತ್ತು ಅಮೆರಿಕ ಸಂಧಾನ ಸಭೆ ವಿಫಲಗೊಂಡಿದೆ.
ಇಸ್ಲಮಾಬಾದ್ ನಲ್ಲಿ ಶನಿವಾರ ಆರಂಭಗೊಂಡ ಸಂಧಾನ ಸಭೆ 21 ಗಂಟೆಗಳ ಸುದೀರ್ಘ ಪ್ರಯತ್ನಗಳ ನಂತರವೂ ಅಮೆರಿಕ ಮತ್ತು ಇರಾನ್ ಸಹಮತಕ್ಕೆ ಬರಲು ವಿಫಲವಾಗಿವೆ.
ಪಶ್ಚಿಮ ಏಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಮಾತುಕತೆಗಳು ಫಲಪ್ರದವಾಗಿಲ್ಲ. ಅಮೆರಿಕ ಮತ್ತು ಇರಾನ್ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾಗಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ತಿಳಿಸಿದ್ದಾರೆ.
ನಾವು 21 ಗಂಟೆಗಳು ಮಾತುಕತೆ ನಡೆಸಿದೆವು. ಹಲವಾರು ಗಂಭೀರ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಿದ್ದೇವೆ. ಪಾಕಿಸ್ತಾನ ಸಂಧಾನ ಸಭೆಯನ್ನು ಅತ್ಯುತ್ತಮವಾಗಿ ನಿಯೋಜಿಸಿತ್ತು. ಇದು ಒಳ್ಳೆಯ ವಿಷಯ. ಆದರೆ ಕೆಟ್ಟ ವಿಷಯವೇನೆಂದರೆ, ನಾವು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಜೆಡಿ ವ್ಯಾನ್ಸ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
‘ನಮ್ಮ ಮಿತಿಗಳು ಏನೆಲ್ಲಾ, ಯಾವ ವಿಷಯಗಳಲ್ಲಿ ನಾವು ಹೊಂದಾಣಿಕೆಗೆ ಸಿದ್ಧ ಮತ್ತು ಯಾವುದರಲ್ಲಿ ರಾಜಿ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಇರಾನ್ ನಿಯೋಗವು ನಮ್ಮ ಷರತ್ತುಗಳನ್ನು ಒಪ್ಪಿಲ್ಲ’ ಎಂದು ಅವರು ಹೇಳಿದರು.
ಮಾತುಕತೆ ವಿಫಲವಾಗಲು ಮುಖ್ಯ ಕಾರಣವೇನು ಎನ್ನುವ ಪ್ರಶ್ನೆಗೆ, ನಿರ್ದಿಷ್ಟ ಮಾಹಿತಿ ನೀಡಲು ವ್ಯಾನ್ಸ್ ನಿರಾಕರಿಸಿದರು. ಆದರೆ ಪರಮಾಣು ವಿಷಯವು ಅವುಗಳಲ್ಲಿ ಒಂದು ಎಂದು ಹೇಳಿದ್ದಾರೆ.
ನಾನು ಎಲ್ಲಾ ವಿವರಗಳನ್ನು ಬಹಿರಂಗಪಡಿಸುವುದಿಲ್ಲ, ಏಕೆಂದರೆ 21 ಗಂಟೆಗಳು ಖಾಸಗಿಯಾಗಿ ನಡೆಸಿದ ಮಾತುಕತೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ’ ಎಂದು ಹೇಳಿದರು.
ಸರಳ ಸತ್ಯವೆಂದರೆ, ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವ ಪ್ರಯತ್ನ ಮಾಡುವುದಿಲ್ಲ, ಅದನ್ನು ತ್ವರಿತವಾಗಿ ಪಡೆಯಲು ಅನುವು ಮಾಡಿಕೊಡುವ ಸಾಧನಗಳಿಗಾಗಿ ಹುಡುಕಾಟ ನಡೆಸುವುದಿಲ್ಲ ಎಂಬ ದೃಢ ಬದ್ಧತೆ ವ್ಯಕ್ತಪಡಿಸಬೇಕು. ನಾವಿನ್ನೂ ಅದನ್ನು ಕಂಡಿಲ್ಲ, ಮುಂದಿನ ದಿನಗಳಲ್ಲಿ ಕಾಣುತ್ತೇವೆ ಎಂಬ ಭರವಸೆ ಇದೆ ಎಂದರು.
ನಾವು ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ ಇರಾನಿಯನ್ನರು ನಮ್ಮ ಷರತ್ತುಗಳನ್ನು ಒಪ್ಪಿಕೊಂಡಿಲ್ಲ. ಅಮೆರಿಕದ ಪ್ರತಿನಿಧಿಗಳು ಹೊಂದಾಣಿಕೆ ತೋರಿದ್ದಾರೆ. ದುರದೃಷ್ಟವಶಾತ್ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
‘ನಾವು ಈಗ ಒಂದು ಸರಳ ಪ್ರಸ್ತಾಪದೊಂದಿಗೆ ಇಲ್ಲಿಂದ ಹೊರಡುತ್ತಿದ್ದೇವೆ. ಇದು ನಮ್ಮ ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾಪವಾಗಿದೆ. ಇರಾನಿಯನ್ನರು ಇದನ್ನು ಸ್ವೀಕರಿಸುತ್ತಾರೆಯೇ ಎಂದು ನಾವು ನೋಡುತ್ತೇವೆ’ ಎಂದು ಹೇಳಿದ ವ್ಯಾನ್ಸ್, ಚರ್ಚೆಯನ್ನು ಮುಂದುವರಿಸುವ ಬಗ್ಗೆ ಯಾವುದೇ ಸುಳಿವು ನೀಡದೆ ವಾಷಿಂಗ್ಟನ್‌ಗೆ ತೆರಳಿದರು.
‘ಇರಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ನಿಯೋಗವು 21 ಗಂಟೆಗಳ ನಿರಂತರ ಮತ್ತು ತೀವ್ರವಾದ ಮಾತುಕತೆ ನಡೆಸಿತು. ಇರಾನ್ ನಿಯೋಗವು ಹಲವಾರು ಉಪಕ್ರಮಗಳನ್ನು ಮುಂದಿಟ್ಟಿದ್ದರೂ ಸಹ, ಅಮೆರಿಕದ ಅಸಮಂಜಸ ಬೇಡಿಕೆಗಳು ಮಾತುಕತೆಯ ಪ್ರಗತಿಯನ್ನು ತಡೆದವು. ಹೀಗಾಗಿ ಸಂಧಾನ ಪ್ರಕ್ರಿಯೆಯು ಅಂತ್ಯಗೊಂಡಿತು’ ಎಂದು ಐಆರ್‌ಐಬಿ ತನ್ನ ಟೆಲಿಗ್ರಾಮ್ ಖಾತೆಯಲ್ಲಿ ತಿಳಿಸಿದೆ.



