ವಾಷಿಂಗ್ಟನ್ (ಯುಎಸ್‌ಎ): ಶಾಂತಿ ಸಂಧಾನ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಅಮೆರಿಕ ಹರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಿದೆ. ಇರಾನ್ ಇಂತಹ ಬೆದರಿಕೆಗಳಿಗೆ ಬಗ್ಗಲ್ಲ ಎಂದು ತಿರುಗೇಟು ನೀಡಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ 21 ಗಂಟೆಗಳ ಚರ್ಚೆಯ ನಂತರ ವಿಫಲಗೊಂಡಿತ್ತು. ಇದರ ಬೆನ್ನಲ್ಲೇ ಅಮೆರಿಕ ಹರ್ಮುಜ್ ಜಲಸಂಧಿಯಲ್ಲಿ ಯಾವುದೇ ಹಡಗು ಸಂಚರಿಸದಂತೆ ದಿಗ್ಧಂಧನ ವಿಧಿಸಿದೆ.
ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ದಿಗ್ಧಂಧನ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕದ ಅದೇಶಕ್ಕೆ ತಿರುಗೇಟು ನೀಡಿರುವ ಇರಾನ್, ಹರ್ಮುಜ್ ಮೇಲೆ ನಮ್ಮ ಅಧಿಕಾರ ಮುಂದುವರಿಯುತ್ತದೆ. ಇದರ ಮೇಲೆ ದಿಗ್ಬಂಧನ ವಿಧಿಸುವ ಹಕ್ಕು ಅಮೆರಿಕಕ್ಕೆ ಇಲ್ಲ. ಒಂದು ವೇಳೆ ದಿಗ್ಬಂಧನ ವಿಧಿಸಿದರೆ ನಾವು ಹರ್ಮುಜ್ ಜಲಸಂಧಿಯಲ್ಲಿ 10 ಲಕ್ಷ ಸೈನಿಕರನ್ನು ನಿಯೋಜಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ದಿಗ್ಬಂಧನವು ಇರಾನ್ ಬಂದರುಗಳು, ಕರಾವಳಿ ಪ್ರದೇಶಗಳಲ್ಲಿ ಮತ್ತು ಅದರ ಸುತ್ತಮುತ್ತ ಸಾಗುವ ಎಲ್ಲಾ ದೇಶಗಳ ಹಡಗುಗಳಿಗೆ ಏಕರೂಪವಾಗಿ ಅನ್ವಯವಾಗುತ್ತದೆ. ಯಾವುದೇ ದೇಶದ ಹಡಗುಗಳು ಸಂಚರಿಸುವಂತಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಎಕ್ಸ್ ಪೋಸ್ಟ್‌ನಲ್ಲಿ, ಟ್ರಂಪ್ ಸೂಚನೆ ಮೇರೆಗೆ ಏಪ್ರಿಲ್ 13 ರಂದು ಬೆಳಗ್ಗೆ 10 ಗಂಟೆಗೆ ಇರಾನಿನ ಬಂದರುಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲಾ ಹಡಗುಗಳ ಸಂಚಾರವನ್ನು ನಿರ್ಬಂಧಿಸಲು ಪ್ರಾರಂಭಿಸುತ್ತೇವೆ.
ಅರೇಬಿಯನ್ ಕೊಲ್ಲಿ, ಒಮಾನ್ ಕೊಲ್ಲಿಯ ಎಲ್ಲಾ ಇರಾನಿನ ಬಂದರುಗಳೂ ಸೇರಿದಂತೆ ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲಾ ರಾಷ್ಟ್ರಗಳ ಹಡಗುಗಳನ್ನು ನಿಷ್ಪಕ್ಷಪಾತವಾಗಿ ನಿರ್ಬಂಧಿಸಲಾಗುವುದು. ಹಾರ್ಮುಜ್ ಜಲಸಂಧಿಯಿಂದ ಇರಾನಿನೇತರ ಬಂದರುಗಳಿಗೆ ಮತ್ತು ಅಲ್ಲಿಂದ ಸಾಗಿಸುವ ಹಡಗುಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.
ಒಮಾನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಸಮೀಪದಲ್ಲಿ ಕಾರ್ಯನಿರ್ವಹಿಸುವಾಗ, ಎಲ್ಲಾ ನೌಕಾಪಡೆಯವರು ಮ್ಯಾರಿನರ್‌ಗಳ ಸೂಚನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಬ್ರಿಡ್ಜ್-ಟು-ಬ್ರಿಡ್ಜ್ ಚಾನೆಲ್ 16ರಲ್ಲಿ ಯುಎಸ್ ನೌಕಾ ಪಡೆಗಳೊಂದಿಗೆ ಸಂವಹನವನ್ನು ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.
ಮತ್ತೊಂದೆಡೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯ ಮೇಲೆ ನೌಕಾ ದಿಗ್ಬಂಧನದ ನಂತರ ಯುಎಸ್ ಪಡೆಗಳಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಕಡಲ ಕಾರಿಡಾರ್‌ನಲ್ಲಿ ಯಾವುದೇ ಆಕ್ರಮಣವನ್ನು ಎದುರಿಸಲಾಗುವುದು. ಯಾವುದೇ ತಪ್ಪು ಲೆಕ್ಕಾಚಾರದ ಕ್ರಮವು ಶತ್ರುಗಳನ್ನು ಜಲಸಂಧಿಯಲ್ಲಿನ ಮಾರಕ ಸುಂಟರಗಾಳಿಯಲ್ಲಿ ಸಿಲುಕಿಸುತ್ತದೆ ಎಂದು ಎಚ್ಚರಿಸಿತ್ತು.
ಹೇಳಿಕೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿ ಆದೇಶಕ್ಕೆ ನೇರ ಪ್ರತಿಕ್ರಿಯೆಯಾಗಿದೆ. ಜಲಮಾರ್ಗದ ಮೇಲೆ ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುತ್ತಾ, ಗಾರ್ಡ್‌ಗಳ ನೌಕಾ ಕಮಾಂಡ್ ಎಕ್ಸ್ ಪೋಸ್ಟ್ ಮೂಲಕ ಇರಾನಿನ ಭದ್ರತಾ ಪಡೆಗಳು ಹಾರ್ಮುಜ್ ಜಲಸಂಧಿ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿವೆ ಎಂದು ದೃಢಪಡಿಸಿತ್ತು.



