ನವದೆಹಲಿ: ಕ್ಷೇತ್ರ ಪುನರ್ ವಿಂಗಡಣೆ ನಂತರ ಸಂಸತ್ ನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ ಶೇ.23.7ರಿಂದ ಶೆ.24ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಪುನರ್ ವಿಂಗಡಣೆ ನಂತರ ಕರ್ನಾಟಕದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ 24ರಿಂದ 43ಕ್ಕೆ ಏರಿಕೆಯಾಗಲಿದೆ. ಇದರಿಂದ ಸಂಸತ್ ನಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ.5.15ರಿಂದ 5.14ಕ್ಕೆ ಕುಸಿಯಲಿದೆ ಎಂದರು.
ಆಂಧ್ರಪ್ರದೇಶದಲ್ಲಿ ಸಂಸತ್ ಸ್ಥಾನ 25ರಿಂದ 38ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಪ್ರಮಾಣ ಶೇ.4.60ರಿಂದ 4.65ಕ್ಕೆ ಏರಿಕೆಯಾಗಲಿದೆ. ತೆಲಂಗಾಣದಲ್ಲಿ 17ರಿಂದ 26ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಪ್ರಮಾಣ ಶೇ.3.18ರಿಂದ 3.13ಕ್ಕೆ ಇಳಿಯಲಿದೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ತಮಿಳುನಾಡಿನಲ್ಲಿ 39ರಿಂದ 59ಕ್ಕೆ ಲೋಕಸಭಾ ಸ್ಥಾನ ಏರಿಕೆಯಾಗಿದೆ. ಇದರಿಂದ ತಮಿಳುನಾಡಿನ ಪ್ರಾತಿನಿಧ್ಯ ಶೇ.7.18ರಿಂದ 7.23ಕ್ಕೆ ಏರಿಕೆಯಾದರೆ, ಕೇರಳದಲ್ಲಿ 20ರಿಂದ 30ಕ್ಕೆ ಜಿಗಿತ ಕಾಣಲಿದ್ದು ಪ್ರಾತಿನಿಧ್ಯ ಪ್ರಮಾಣ ಶೇ.3.67ರಿಂದ ಶೇ.3.68ಕ್ಕೆ ಏರಿಕೆಯಾಗಲಿದೆ ಎಂದು ಅವರು ವಿವರಿಸಿದರು.



