Monday, September 21, 2026
Google search engine
Homeವಿದೇಶಇರಾನ್-ಅಮೆರಿಕ ಪಟ್ಟು: ಸಂಧಾನಕ್ಕೆ ಪಾಕಿಸ್ತಾನ ಸರ್ಕಸ್

ಇರಾನ್-ಅಮೆರಿಕ ಪಟ್ಟು: ಸಂಧಾನಕ್ಕೆ ಪಾಕಿಸ್ತಾನ ಸರ್ಕಸ್

ಟೆಹರಾನ್: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಂಧಾನ ಸಭೆ ಮುರಿದುಬಿದ್ದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ ನಡುವೆಯೇ ಯುದ್ಧ ಪುನರಾರಂಭವಾಗುವ ಭೀತಿ ಎದುರಾಗಿದೆ.

ಅಮೆರಿಕದ ಜೊತೆಗಿನ ಒಪ್ಪಂದವನ್ನು ಇರಾನ್ ತಿರಸ್ಕರಿಸಿದ್ದು, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಂಧಾನ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದೆ. ಆದರೆ ಪಾಕಿಸ್ತಾನ ಇರಾನ್ ಮನವೊಲಿಸಿ ಎರಡನೇ ಸುತ್ತಿನ ಮಾತುಕತೆ ನಡೆಸಲು ಸಾಕಷ್ಟು ಪ್ರಯತ್ನ ನಡೆದಿದೆ. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ತಡೆಯಲು ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದೆ.

ಹರ್ಮುಜ್ ಜಲಸಂಧಿಯ ಮೇಲೆ ದಿಗ್ಭಂಧನ ವಿಧಿಸಿರುವ ಅಮೆರಿಕ, ಇರಾನ್ ಹಡಗುಗಳ ಮೇಲೆ ದಾಳಿ ನಡೆಸಿ, ಒಂದು ಹಡಗನ್ನು ವಶಕ್ಕೆ ಪಡೆದಿದೆ. ಹರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ಮಾತುಕತೆಗೆ ಅಡ್ಡಿ ಎಂದು ಪಾಕಿಸ್ತಾನ ಅಮೆರಿಕದ ಮನವೊಲಿಕೆಗೆ ಯತ್ನಿಸಿದೆ. ಆದರೆ ಪಾಕಿಸ್ತಾನದ ಸಲಹೆಯನ್ನು ತಿರಸ್ಕರಿಸಿರುವ ಅಮೆರಿಕ, ಭೀಕರ ದಾಳಿ ಎದುರಿಸಲು ಸಜ್ಜಾಗಿ ಎಂದು ಕರೆ ನೀಡಿದೆ.

ಅಮೆರಿಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಪದೇಪದೆ ಯುದ್ಧದ ಕುರಿತು ಸುಳ್ಳು ಹೇಳಿಕೆ ನೀಡುತ್ತಿದೆ. ಅಮೆರಿಕವನ್ನು ನಾವು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಹಾಗಾಗಿ ಒಪ್ಪಂಧ ಪ್ರಸ್ತಾಪವನ್ನು ನಾವು ತಿರಸ್ಕರಿಸುತ್ತೇವೆ ಎಂದು ಇರಾನ್ ಹೇಳಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದ ಏಪ್ರಿಲ್ 22ಕ್ಕೆ ಅಂತ್ಯಗೊಳ್ಳಲಿದೆ. ಇದಕ್ಕೂ ಮುನ್ನ ಒಪ್ಪಂದಕ್ಕೆ ಬರುವಂತೆ ಅಮೆರಿಕ ಒತ್ತಡ ಹೇರಿದೆ. ಆದರೆ ಸದ್ಯದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜೀ ಸಂಧಾನಕ್ಕೆ ಬರುವುದು ಕಷ್ಟವಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ ಆವರಿಸಿದೆ.

‘ಅಮೆರಿಕ ಜೊತೆಗಿನ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಭಾಗವಹಿಸುವ ಯಾವುದೇ ಯೋಜನೆಗಳಿಲ್ಲ’ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಪ್ರಸಾರಕ ಸಂಸ್ಥೆ ಐಆರ್‌ಐಬಿ ಭಾನುವಾರ ವರದಿ ಮಾಡಿದೆ.

‘ಕದನ ವಿರಾಮ ಉಲ್ಲಂಘಿಸಿರುವ ಅಮೆರಿಕವು ಒಮಾನ್ ಕೊಲ್ಲಿಯಲ್ಲಿ ಇರಾನ್ ವಾಣಿಜ್ಯ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿ, ಅದರ ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸಿದೆ. ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಹಡಗಿನಲ್ಲಿ ಇಳಿಯುವ ಮೂಲಕ ಕಡಲ್ಗಳ್ಳತನ ನಡೆಸಿದೆ. ಇದಕ್ಕೆ ಶೀಘ್ರವೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಇರಾನ್ ಸೇನೆಯ ಪ್ರಧಾನ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

‘ಅಮೆರಿಕವು ಪದೇ ಪದೇ ನಿಲುವು ಬದಲಿಸುತ್ತಿರುವುದು, ಅವಾಸ್ತವಿಕ ಬೇಡಿಕೆಗಳನ್ನು ಇರಿಸುತ್ತಿರುವುದು ಮತ್ತು ಹಡಗು ಸಂಚಾರಕ್ಕೆ ನಿರಂತರವಾಗಿ ಅಡ್ಡಿಪಡಿಸುತ್ತಿರುವುದೇ ನಾವು ಎರಡನೇ ಸುತ್ತಿನ ಮಾತುಕತೆಗೆ ಗೈರಾಗಲು ಕಾರಣ’ ಎಂದು ಇರಾನ್ ಸ್ಪಷ್ಟವಾಗಿ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಎರಡನೇ ಸುತ್ತಿನ ಮಾತುಕತೆಗೆ ನಿರಾಕರಿಸಿರುವುದು ಮತ್ತು ಹೊರ್ಮುಜ್ ಅನ್ನು ಮತ್ತೆ ಮುಚ್ಚಲಾಗಿದೆ ಎಂಬುದನ್ನು ಇರಾನ್ ಸೇನೆ ವಕ್ತಾರ ಇಬ್ರಾಹಿಂ ಝಲ್ಫಾಘರಿ ಅವರು ಖಚಿತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments