Tuesday, May 26, 2026
Google search engine
Homeರಾಜ್ಯಪ್ರವಾಸಿ ತಾಣ ಯಾಣಕ್ಕೆ ರಾಷ್ಟ್ರೀಯ ಭೂಪಾರಂಪರಿಕ ತಾಣ ಗೌರವ!

ಪ್ರವಾಸಿ ತಾಣ ಯಾಣಕ್ಕೆ ರಾಷ್ಟ್ರೀಯ ಭೂಪಾರಂಪರಿಕ ತಾಣ ಗೌರವ!

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಿದೆ.

ಯಾಣದ ಶಿಖರಗಳನ್ನು ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ, ಯಾಣದ ಶಿಲೆಗಳನ್ನು ‘ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ಸರ್ಕಾರಕ್ಕೆ ಜಿಎಸ್ಐ ಪತ್ರ: ಜಿಎಸ್ಐ ಇಲಾಖೆಯ 176ನೇ ಸಂಸ್ಥಾಪನಾ ದಿನಾಚರಣೆಯ ನೆನಪಿಗಾಗಿ ಮಾರ್ಚ್ 6, 2026ರಂದು ಈ ಘೋಷಣೆಯ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಕುರಿತು ಜಿಎಸ್ಐ ಮಹಾನಿರ್ದೇಶಕ ಅಸಿತ್ ಸಹಾ ಅವರು ಏಪ್ರಿಲ್ 13ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಯಾಣದ ಈ ಅಪರೂಪದ ನೈಸರ್ಗಿಕ ನಿಧಿಯನ್ನು ಸಂರಕ್ಷಿಸಲು ಅಗತ್ಯವಾದ ಅಧಿಸೂಚನೆಯನ್ನು ಹೊರಡಿಸುವಂತೆ ಮತ್ತು ಈ ಪ್ರದೇಶದಲ್ಲಿ ಸುಸ್ಥಿರ ‘ಭೂ-ಪ್ರವಾಸೋದ್ಯಮ’ ಅಭಿವೃದ್ಧಿಪಡಿಸುವಂತೆ ಅವರು ಮನವಿ ಮಾಡಿದ್ದಾರೆ.

2,700 ದಶಲಕ್ಷ ವರ್ಷಗಳ ಇತಿಹಾಸ ಹೊಂದಿರುವ ಯಾಣದ ಈ ಬೃಹತ್ ಕಪ್ಪು ಶಿಲೆಗಳು ಕೇವಲ ಪ್ರವಾಸಿ ಆಕರ್ಷಣೆಯಲ್ಲ, ಇವು ಭೂಮಿಯ ವಿಕಾಸದ ಕಥೆ ಹೇಳುವ ಜೀವಂತ ಪಳೆಯುಳಿಕೆಗಳಾಗಿವೆ.

ಯಾಣದ ಕಲ್ಲುಗಳು ಮುಖ್ಯವಾಗಿ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಿಂದ ಕೂಡಿದ್ದು, ಶತಕೋಟಿ ವರ್ಷಗಳ ಹವಾಮಾನ ವೈಪರೀತ್ಯ ಹಾಗೂ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಇಂದಿನ ವಿಶಿಷ್ಟ ರೂಪ ಪಡೆದಿವೆ ಎಂದು ವರದಿಗಳು ಹೇಳಿವೆ.

61 ವಿಶಿಷ್ಟ ಭೂರೂಪಗಳ ಸಮೂಹ: ಯಾಣದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಟ್ಟು 61 ವಿವಿಧ ರೀತಿಯ ಭೂರೂಪಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 120 ಮೀಟರ್ ಎತ್ತರದ ಭೈರವೇಶ್ವರ ಶಿಖರ ಹಾಗೂ 90 ಮೀಟರ್ ಎತ್ತರದ ಮೋಹಿನಿ ಶಿಖರಗಳು ಪ್ರಮುಖವಾದವು. ಕಡಿದಾದ ಗೋಡೆಗಳು, ಗುಹೆಗಳು ಮತ್ತು ಶಿಲಾ ಸಂದುಗಳ ಮೂಲಕ ಇವು ಭೂವಿಜ್ಞಾನಿಗಳಿಗೆ ಸಂಶೋಧನೆಯ ಮುಕ್ತ ಪ್ರಯೋಗಾಲಯದಂತಿವೆ.

ಸಂರಕ್ಷಣೆಯ ಅನಿವಾರ್ಯತೆ: ನಿಸರ್ಗದತ್ತವಾಗಿ ಬಂದಿರುವ ಇಂತಹ ಭೂಪಾರಂಪರಿಕ ಸಂಪತ್ತುಗಳು ಒಮ್ಮೆ ನಾಶವಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ಇವುಗಳನ್ನು ಮಾನವ ಹಸ್ತಕ್ಷೇಪದಿಂದ ರಕ್ಷಿಸುವುದು ಅಗತ್ಯ ಎಂದು ಜಿಎಸ್ಐ ತನ್ನ ನಿರ್ಣಯದಲ್ಲಿ ತಿಳಿಸಿದೆ. ಸ್ಥಳೀಯ ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳಲು ಈ ಘೋಷಣೆ ಪೂರಕವಾಗಲಿದೆ.

ಈ ಘೋಷಣೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನಕ್ಷೆಯಲ್ಲಿ ಯಾಣಕ್ಕೆ ಮತ್ತಷ್ಟು ಪ್ರಾಮುಖ್ಯತೆ ಲಭಿಸಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ಹಾಗೂ ಪ್ರವಾಸಿಗರನ್ನು ಸೆಳೆಯಲು ಇದು ಸಹಕಾರಿಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments