ಕೋಲಾರ: ಜನಗಣತಿ–2027ರ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಮನೆಪಟ್ಟಿ ಹಾಗೂ ಮನೆ ಗಣತಿ ಕಾರ್ಯದಲ್ಲಿ ವಿಳಂಬ, ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವುದಕ್ಕೆ ಜಿಲ್ಲೆಯ 6 ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಕೋಲಾರ ತಾಲ್ಲೂಕು ತಹಶೀಲ್ದಾರ್ ಡಾ.ನಯನಾ, ಮುಳಬಾಗಿಲು ತಹಶೀಲ್ದಾರ್ ಗೀತಾ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತಾ, ಮಾಲೂರು ತಹಶೀಲ್ದಾರ್ ರೂಪಾ ಹಾಗೂ ಶ್ರೀನಿವಾಸಪುರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ನೋಟಿಸ್ ನೀಡಿದ್ದಾರೆ. ಇವರನ್ನು ಗಣತಿಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನಡೆತೆಗಳು) ನಿಯಮ 2021ರ ಕಾಲಂ 3 ಹಾಗೂ ಜನಗಣತಿ ಕಾಯ್ದೆ 1948 ರ ಕಾಲಂ 6(2) ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜನಗಣತಿ ಕಾರ್ಯಗಳಲ್ಲಿ ಬೇಜವಾಬ್ದಾರಿ ತೋರುವುದು ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 222ರಂತೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. 24 ಗಂಟೆಯಲ್ಲಿ ನೋಟಿಸ್‌ಗೆ ಸಮಜಾಯಿಷಿ ನೀಡಬೇಕು ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮನೆಪಟ್ಟಿ ಹಾಗೂ ಮನೆ ಗಣತಿ ಕಾರ್ಯ ಏ.16ರಂದು ಆರಂಭಗೊಂಡಿದ್ದು, ಮೇ 15ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರು ತಮಗೆ ಹಂಚಿಕೆಯಾಗಿರುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ತಹಶೀಲ್ದಾರ್‌ಗಳನ್ನು ಆಯಾಯ ತಾಲ್ಲೂಕುಗಳಿಗೆ ಜನಗಣತಿ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಜನಗಣತಿ ತಂತ್ರಾಂಶದಲ್ಲಿ ಜಿಲ್ಲೆಯ ಪ್ರಗತಿ ಅತಂತ್ಯ ಕಡಿಮೆ ಆಗಿರುವುದಕ್ಕೆ ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್‌ಗಳು ಮನೆಗಣತಿ ವಿಚಾರದಲ್ಲಿ ಸರಿಯಾಗಿ ನಿಗಾ ವಹಿಸದೆ, ಪ್ರಗತಿ ಕುಂಠಿತವಾಗಿರುವ ಹಂತದ ಬಗ್ಗೆ ಪರಾಮರ್ಶಿಸದೆ ಇರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ಡಾ.ನಯನಾ ಅವರನ್ನು ಕೋಲಾರ ಗ್ರಾಮೀಣ ಚಾರ್ಜ್ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಈ ಪ್ರದೇಶದಲ್ಲಿ ಬಿಆರ್‌ಸಿ, ಸಿಆರ್‌ಸಿ ಹಾಗೂ ಮೇಲ್ವಿಚಾರಕರು ಕಾರ್ಯನಿರ್ವಹಿಸದೆ ಇರುವುದರಿಂದ ಜಿಲ್ಲೆಯು ಅತ್ಯಂತ ಕಡಿಮೆ ಪ್ರಗತಿ ಕಂಡಿದೆ. ಜನಗಣತಿ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ನಿಗದಿತ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕಿದೆ. ಎಲ್ಲಾ ಗಣತಿದಾರರು ಮೊಬೈಲ್ ಆ್ಯಪ್‌ನಲ್ಲಿ ಲಾಗಿನ್ ಮಾಡಿಕೊಂಡು ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಏ.22ರಂದು ಪ್ರಗತಿ ಪರಿಶೀಲನೆ ಮಾಡಿದ್ದು, ಕೋಲಾರ ತಾಲ್ಲೂಕಿನ ಗ್ರಾಮೀಣ ಚಾರ್ಜ್‌ನಲ್ಲಿ 217 ಗಣತಿದಾರರು ಲಾಗಿನ್ ಆಗಿಲ್ಲ, ಕೆಲಸ ನಿರ್ವಹಿಸಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಗಣತಿದಾರರು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕಿರುವುದು ಚಾರ್ಜ್ ಅಧಿಕಾರಿಯಾದ ತಮ್ಮ ಜವಾಬ್ದಾರಿ ಆಗಿರುತ್ತದೆ. ಆದರೆ, ತಾವು ಆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದೀರಿ ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ನೋಟೀಸ್ ನಲ್ಲಿ ತಿಳಿಸಿದ್ದಾರೆ



