Wednesday, May 13, 2026
Google search engine
Homeಕಾನೂನುಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ: ಅಪರಾಧಿಗೆ 6 ವರ್ಷ ಶಿಕ್ಷೆ ಪ್ರಕಟ

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ: ಅಪರಾಧಿಗೆ 6 ವರ್ಷ ಶಿಕ್ಷೆ ಪ್ರಕಟ

ಶಿವಮೊಗ್ಗ: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ 2022ರಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಅರಾಫತ್ ಅಲಿಗೆ 6 ವರ್ಷ ಜೈಲು ಶಿಕ್ಷೆ, 47 ಸಾವಿರ ರೂ ದಂಡ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯನ್ನು ಕೀನ್ಯಾ ನೈರೊಬಿಯಾದಿಂದ ದೆಹಲಿಗೆ ಬಂದಾಗ ಎನ್‌ಐಎ ಅಧಿಕಾರಿಗಳು 2023ರಲ್ಲಿ ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಕುರಿತು ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.

ವಾದ-ಪ್ರತಿವಾದ ಆಲಿಸಿದ ನ್ಯಾ.ಕೆಂಪರಾಜು, ಅಪರಾಧಿಗೆ 6 ವರ್ಷ ಸಜೆ ಹಾಗೂ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ 2025ರಲ್ಲಿ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಒಟ್ಟು ಮೂವರಿಗೆ ಸಜೆಯಾಗಿದ್ದು, ಉಳಿದ 9 ಮಂದಿ ಶಂಕಿತರ ವಿಚಾರಣೆ ನಡೆಯುತ್ತಿದೆ.

ಅಪರಾಧಿಅರಾಫತ್ ನನ್ನ 2019ರಲ್ಲಿ ಬೆಂಗಳೂರಿನಲ್ಲಿ ಇದೇ ಪ್ರಕರಣದ ಶಂಕಿತ ಮುಸಾವೀರ್ ಹುಸೇನ್ ಶಾಹೀಬ್ (ಎ-11) ಹಾಗೂ ಅಬ್ದುಲ್ ಮತೀನ್ ತಾಹ (ಎ-12) ಅವರನ್ನು ಭೇಟಿ ಮಾಡಿ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದರು. ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯ ಸದಸ್ಯನಾಗಿ ನೇಮಿಸಿಕೊಂಡಿದ್ದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಿ ಅಶಾಂತಿ ಸೃಷ್ಟಿ ಹಾಗೂ ಹಿಂದುತ್ವವನ್ನು ಕುಗ್ಗಿಸುವ ಉದ್ದೇಶ ಹಿನ್ನೆಲೆಯಲ್ಲಿ ಉಗ್ರ ಕೃತ್ಯಗಳಿಗೆ ಒಳಸಂಚು ರೂಪಿಸಿದ್ದ.

ಅರಾಫತ್ ಅಲಿ, ಯುವಕರನ್ನು ಐಸಿಸ್ ಸಂಘಟನೆಗೆ ನೇಮಕಾತಿ ಜವಾಬ್ದಾರಿ ಹೊತ್ತುಕೊಂಡಿದ್ದ. ಇದೇ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಶಾರೀಕ್ ಹಾಗೂ ಮಾಜ್ ಮುನೀರ್ ನನ್ನ ಉಗ್ರ ಸಂಘಟನೆಗೆ ಸೇರಿಸಿ ಸಕ್ರಿಯನಾಗಿಸಿದ್ದ. ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ಕೇಂದ್ರದ ಸಿಎಎ ಹಾಗೂ ಎನ್‌ಆರ್ ಸಿ ವಿರೋಧಿಸಿ ಕದ್ರಿ ಗೋಡೆಗಳ ಮೇಲೆ ಆಕ್ಷೇಪಾರ್ಹ ಬರಹ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ನಿರಂತರ ಸಂಪರ್ಕದಲ್ಲಿದ್ದು, ಹಣಕಾಸಿನ ನೆರವು ಒದಗಿಸಿದ್ದ.ಸಂಚಿನ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ಧಾರೆ.

ಎನ್‌ಐಎ ಅಧಿಕಾರಿಗಳು ಉಗ್ರರ ಹಿಂದೂ ಮಾಡ್ಯೂಲ್ ಬೇಧಿಸಿ ಮುಸಾವೀರ್ ಹಾಗೂ ಅಬ್ದುಲ್ ಮತೀನ್‌ನೊಂದಿಗೆ ನಂಟು ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಅರಾಫತ್ 2020ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದ. ವಿದೇಶದಲ್ಲಿದ್ದುಕೊಂಡೇ ಕರ್ನಲ್ ಹಾಗೂ ಹ್ಯಾಂಡ್ಲರ್‌ಗಳ ಮೂಲಕ ಶಂಕಿತ ಉಗ್ರರಿಗೆ ಫಂಡಿಂಗ್ ಮಾಡುತ್ತಿದ್ದ. ಐಎಸ್ ಸಂಘಟನೆ ಪ್ರಚಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಭಯೋತ್ಪಾದಕ ಕೃತ್ಯಗಳಿಗೆ ವಿದೇಶದಲ್ಲೇ ಸಂಚು ರೂಪಿಸುತ್ತಿದ್ದ.

2024ರಲ್ಲಿ ದಿ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮತೀನ್‌ನನ್ನು 2024ರಲ್ಲಿ ಪಶ್ಚಿಮ ಬಂಗಾಳದ ಲಾಡ್ಜ್‌ವೊಂದರಲ್ಲಿ ಪೊಲೀಸರು ಬಂಧಿಸಿದ್ದರು.ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಮೊಹಮ್ಮದ್ ಶಾರೀಕ್ ನ್ಯಾಯಾಂಗ ಬಂಧನದಲ್ಲಿದ್ದು, ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಏ.25ಕ್ಕೆ ಅಂತಿಮ ತೀರ್ಪು ಕಾಯ್ದಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments