Monday, June 8, 2026
Google search engine
Homeವಿದೇಶಪಾಕಿಸ್ತಾನದ ಸಂಧಾನ ಸಕ್ಸಸ್: ಕದನ ವಿರಾಮ ವಿಸ್ತರಣೆ

ಪಾಕಿಸ್ತಾನದ ಸಂಧಾನ ಸಕ್ಸಸ್: ಕದನ ವಿರಾಮ ವಿಸ್ತರಣೆ

ವಾಷಿಂಗ್ಟನ್: ಇರಾನ್​ ಜೊತೆಗಿನ ಸಂಧಾನ ಸಭೆ ತಾರ್ತಿಕ ಅಂತ್ಯ ಕಾಣುವವರೆಗೂ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಿಸಿದ್ದಾರೆ.

ಎರಡು ದೇಶಗಳ ಯುದ್ಧ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದ ಪಾಕಿಸ್ತಾನದ ಕೋರಿಕೆ ಮೇರೆಗೆ ಡೊನಾಲ್ಡ್ ಟ್ರಂಪ್ ಕದನ ವಿರಾಮ ವಿಸ್ತರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಮಧ್ಯಪ್ರಾಚ್ಯ ಯುದ್ಧದ ಭೀತಿ ಮತ್ತಷ್ಟು ದಿನಗಳ ಕಾಲ ತಪ್ಪಿದಂತಾಗಿದೆ.

ಇರಾನ್​ ನಾಯಕರು ಏಕೀಕೃತ ಪ್ರಸ್ತಾವನೆಗೆ ಬರುವವರೆಗೆ ಈ ಕದನ ವಿರಾಮ ವಿಸ್ತರಣೆ ಆಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಏಪ್ರಿಲ್​ 8ರಿಂದ ಜಾರಿಗೆ ಬಂದಿದ್ದ ಇರಾನ್​ ಮತ್ತು ಅಮೆರಿಕ​ ನಡುವಿನ ಎರಡು ವಾರದ ಕದನ ವಿರಾಮ ಅಂತ್ಯಗೊಳ್ಳುವ ಕೇವಲ ಎರಡು ಗಂಟೆ ಮುನ್ನ ಈ ಘೋಷಣೆ ಹೊರಬಿದ್ದಿದೆ.  ಇದಕ್ಕೂ ಮುನ್ನ ಉಭಯ ದೇಶಗಳು ಯುದ್ಧಕ್ಕೆ ಸಿದ್ಧ. ಭೀಕರ ದಾಳಿ ಮಾಡುತ್ತೇವೆ ಎಂದೆಲ್ಲಾ ಹೇಳಿಕೆ ನೀಡಿ ಆತಂಕ ಮೂಡಿಸಿದ್ದವು.

ಇರಾನ್​ ಜೊತೆ ಶಾಂತಿ ಮಾತುಕತೆಗಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗದ ಇಸ್ಲಾಮಾಬಾದ್ ಭೇಟಿ ಸಾಧ್ಯವಾಗದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅಮೆರಿಕದ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಮಂಗಳವಾರ ಇಸ್ಲಾಮಾಬಾದ್‌ಗೆ ಶಾಂತಿ ಒಪ್ಪಂದದ ಮಾತುಕತೆಗೆ ತೆರಳಬೇಕಿತ್ತು. ಆದರೆ, ಪಾಕಿಸ್ತಾನ ಪ್ರವಾಸ ಇಂದು ಸಾಧ್ಯವಾಗುತ್ತಿಲ್ಲ ಎಂದು ಶ್ವೇತಭವನ ಪ್ರಕಟಣೆ ಹೊರಡಿಸಿತು.

ಇರಾನ್​ ಸರ್ಕಾರದಲ್ಲಿ ಶಾಂತಿ ಒಪ್ಪಂದ ಕುರಿತು ಗಂಭೀರ ಬಿರುಕು ಏರ್ಪಟ್ಟಿದೆ ಎಂಬ ಅಂಶ ಆಧರಿಸಿ ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಕೋರಿಕೆಯ ಮೇರೆಗೆ ಇರಾನ್​ ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ಅವರ ದಾಳಿಯನ್ನು ತಡೆಹಿಡಿಯಲು ನಮ್ಮನ್ನು ಕೇಳಲಾಗಿದೆ. ಅಮೆರಿಕ ಇರಾನ್​ ಮೇಲಿನ ದಾಳಿಯನ್ನು ತಡೆಯುತ್ತದೆ. ಆದರೆ, ಇರಾನ್‌ನ ಬಂದರುಗಳ ಮೇಲಿನ ಆರ್ಥಿಕ ದಿಗ್ಬಂಧನವು ಜಾರಿಯಲ್ಲಿರುತ್ತದೆ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ.

ಇರಾನ್​ ಮೇಲೆ ದಿಗ್ಬಂಧನವನ್ನು ಮುಂದುವರಿಸಲು ಮಿಲಿಟರಿಗೆ ನಿರ್ದೇಶನ ನೀಡಿದ್ದೇವೆ ಎಂದು ಕೂಡ ಟ್ರಂಪ್​ ತಿಳಿಸಿದ್ದಾರೆ.

ಅಮೆರಿಕದ ಈ ಕ್ರಮ ಟೀಕಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಮುಂದುವರೆಸಿದ್ದರಿಂದ ಕದನ ವಿರಾಮದ ಉಲ್ಲಂಘನೆಯಾಗಿದೆ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿ, ಅದರ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಳ್ಳುವುದು ಇನ್ನೂ ದೊಡ್ಡ ಉಲ್ಲಂಘನೆಯಾಗಿದೆ. ಈ ನಿರ್ಬಂಧಗಳನ್ನು ಹೇಗೆ ತಟಸ್ಥಗೊಳಿಸುವುದು, ತನ್ನ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಬೆದರಿಸುವಿಕೆಯನ್ನು ಹೇಗೆ ವಿರೋಧಿಸುವುದು ಎಂಬುದು ಇರಾನ್‌ಗೆ ತಿಳಿದಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸಿದ್ದಕ್ಕಾಗಿ ಟ್ರಂಪ್ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ ಅರ್ಪಿಸಿದ್ದು, ಸಂಘರ್ಷವನ್ನು ಕೊನೆಗೊಳಿಸಲು ಎರಡೂ ಕಡೆಯವರಿಗೂ ಸಮಗ್ರ ಶಾಂತಿ ಒಪ್ಪಂದವನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments