ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ಏಳು ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದ್ದು,ಜೂ.18ರಂದು ಮತದಾನ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.
ಜೂ.1ರಂದು ಅಧಿಸೂಚನೆ ಹೊರಡಲಿದ್ದು, ಜೂ.8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.9 ನಾಮಪತ್ರಗಳ ಪರಿಶೀಲನೆ ನಡೆದು, ನಾಮಪತ್ರ ಹಿಂಪಡೆಯಲು ಜೂ.11 ಕಡೆಯ ದಿನವಾಗಿದೆ.
ಜೂ.18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ, 5 ಗಂಟೆ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಯಾರ್ಯಾರು ನಿವೃತ್ತಿ:
ಗೋವಿಂದರಾಜ್(ಕಾಂಗ್ರೆಸ್), ನಾಸೀರ್ ಅಹಮದ್ (ಕಾಂಗ್ರೆಸ್), ಬಿ.ಕೆ.ಹರಿಪ್ರಸಾದ್(ಕಾಂಗ್ರೆಸ್), ಎಂಟಿಬಿ ನಾಗರಾಜ್(ಬಿಜೆಪಿ), ಪ್ರತಾಪ್ ಸಿಂಹ ನಾಯಕ್(ಬಿಜೆಪಿ), ತಿಪ್ಪಣ್ಣಪ್ಪ (ಬಿಜೆಪಿ), ಸುನಿಲ್ ವಲ್ಯಾಪುರೆ(ಬಿಜೆಪಿ) ಅವರು ನಿವೃತ್ತಿಯಾಗಲಿದ್ದಾರೆ.
ಬಿಜೆಪಿಯಿಂದ ನಾಲ್ವರು ಹಾಗೂ ಕಾಂಗ್ರೆಸ್‌ನಿಂದ ಮೂವರು ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 4 ಸ್ಥಾನ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ 3 ಸ್ಥಾನ ಲಭಿಸುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡರೆ 3 ಸ್ಥಾನಗಳನ್ನು ಗೆಲ್ಲಬಹುದು.
ಮೂಲಗಳ ಪ್ರಕಾರ ಬಿಜೆಪಿಗೆ 2 ಸ್ಥಾನಗಳು ಲಭ್ಯವಾಗಲಿದ್ದು, ಉಳಿದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಬಿಜೆಪಿ ಈ ಬಾರಿ ಹಳಬರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕುವ ನಿರೀಕ್ಷೆ ಇದೆ. ಪಕ್ಷದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಹಾಗೂ ಮುಂಬರುವ 2028ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಲು ಪಕ್ಷ ಮುಂದಾಗಿದೆ.



