ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಯದಾಗಿ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ರಾಜ್ಯಪಾಲರು ಅದಕ್ಕೆ ಅಂಕಿತ ಹಾಕದೇ ತಮ್ಮ ಬಳಿ ಇಟ್ಟುಕೊಂಡಿದ್ದರು.
ಇದರ ಹಿಂದೆ ರಾಜಕಾರಣ ಇದೆ ಎಂದು ಆರೋಪಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು, ಕಾಂಗ್ರೆಸ್ ಕಾರ್ಯಕರ್ತರು, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ಅವರು ಧಾರವಾಡ ಪಾಲಿಕೆ ಎದುರುಗಡೆ ನಿರಂತರ ಧರಣಿ ಆರಂಭಿಸಿದ್ದರು.
ಈ ಧರಣಿ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಕೊನೆಗೂ ಅಂಕಿತ ಹಾಕಿದ್ದಾರೆ. ಆದರೆ, ಈ ಆದೇಶದ ಪ್ರತಿಯನ್ನು ಸರ್ಕಾರದ ಪ್ರತಿನಿಧಿಗಳು ನೇರವಾಗಿ ತಮಗೆ ತಂದುಕೊಡುವವರೆಗೂ ಧರಣಿ ನಡೆಯಲಿದೆ ಎಂದು ಬಿ.ಡಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.



