ಬೆಂಗಳೂರು: ಭಾರ್ತಿ ಏರ್‌ಟೆಲ್ ತನ್ನ ಹೊಸ ಪ್ರಯಾರಿಟಿ ಪೋಸ್ಟ್ ಪೇಯ್ಡ್ ಸೇವೆಯನ್ನು ದೂರಸಂಪರ್ಕ ಇಲಾಖೆಯ (ಡಿಓಟಿ) ಸಮಿತಿಯ ಮುಂದೆ ಸಮರ್ಥಿಸಿಕೊಂಡಿದೆ.
5G ನೆಟ್ ವರ್ಕ್ ಸ್ಲೈಸಿಂಗ್ ತಂತ್ರಜ್ಞಾನದ ಆಧಾರಿತವಾಗಿರುವ ಈ ಕೊಡುಗೆಯು, ನೆಟ್ ನ್ಯೂಟ್ರಾಲಿಟಿ (ಜಾಲ ತಟಸ್ಥತೆ) ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಪ್ರಿಪೇಯ್ಡ್ ಬಳಕೆದಾರರ ಸೇವಾ ಗುಣಮಟ್ಟವನ್ನು ಕುಗ್ಗಿಸುವುದಿಲ್ಲ ಎಂದು ಸಂಸ್ಥೆ ಪ್ರತಿಪಾದಿಸಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಮಿತಿಯು ಕೇಳಿದ ಸ್ಪಷ್ಟೀಕರಣಕ್ಕೆ ಏರ್‌ಟೆಲ್ ಸಲ್ಲಿಸಿದ ಉತ್ತರದ ಪ್ರಕಾರ, ಸೇವೆಗಳನ್ನು ನೀಡಲು 5ಜಿಯ ಪ್ರಮುಖ ವೈಶಿಷ್ಟ್ಯಗಳ ಬಳಕೆಗೆ ಅನುಮತಿ ನೀಡದಿದ್ದರೆ, ಅದು ದೇಶದಲ್ಲಿ 6ಜಿ ತಂತ್ರಜ್ಞಾನದ ಸಾಮರ್ಥ್ಯ ಮತ್ತು ಭವಿಷ್ಯಕ್ಕೆ ಧಕ್ಕೆ ತರಲಿದೆ ಎಂದು ಕಂಪನಿ ತಿಳಿಸಿದೆ.
“ಪ್ರಯಾರಿಟಿ ಪೋಸ್ಟ್ ಪೇಯ್ಡ್ ಸೇವೆಯನ್ನು ಕಂಟೆಂಟ್- ನ್ಯೂಟ್ರಲ್ (ವಿಷಯ-ತಟಸ್ಥ) ರೀತಿಯಲ್ಲಿ ಜಾರಿಗೆ ತರಲಾಗಿದೆ ಮತ್ತು ಇದು ಪ್ರಸ್ತುತ ಇರುವ ಟ್ರಾಯ್ ಮತ್ತು ಡಿಓಟಿ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ಇಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವುದು, ವೇಗ ತಗ್ಗಿಸುವುದು, ಕಂಟೆಂಟ್ ಆಧಾರಿತ ಆದ್ಯತೆ ನೀಡುವುದು, ಝೀರೋ-ರೇಟಿಂಗ್ ಅಥವಾ ವಿಶೇಷ ರಿಯಾಯಿತಿ ನೀಡುವ ಕೆಲಸವನ್ನು ಮಾಡಲಾಗಿಲ್ಲ,” ಎಂದು ಏರ್ ಟೆಲ್ ಹೇಳಿದೆ.
ಮೇ 19 ರಂದು ಏರ್‌ಟೆಲ್ ಪ್ರಯಾರಿಟಿ ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿತ್ತು. ಇದು ಗ್ರಾಹಕರಿಗೆ ಜನದಟ್ಟಣೆ ಇರುವ ಪ್ರದೇಶಗಳಲ್ಲೂ ಸ್ಥಿರವಾದ ಇಂಟರ್ನೆಟ್ ವೇಗವನ್ನು ನೀಡುವ ಭರವಸೆ ನೀಡುತ್ತಿದೆ.
“ಏರ್‌ಟೆಲ್ ಪ್ರಯಾರಿಟಿ ವೈಶಿಷ್ಟ್ಯವು ಪ್ರಿಪೇಯ್ಡ್ ಆಗಿರಲಿ ಅಥವಾ ಪೋಸ್ಟ್ ಪೇಯ್ಡ್ ಆಗಿರಲಿ, ಯಾವುದೇ ಗ್ರಾಹಕರ ಸೇವಾ ಗುಣಮಟ್ಟವನ್ನು ಕಡಿಮೆ ಮಾಡುವುದಿಲ್ಲ,” ಎಂದು ಕಂಪನಿ ಸ್ಪಷ್ಟಪಡಿಸಿದೆ.
ಪ್ರಸ್ತುತ, ನೆಟ್ ವರ್ಕ್ ಹೆಚ್ಚು ಬಳಕೆಯಲ್ಲಿರುವ ಅವಧಿಯಲ್ಲಿ ಒಟ್ಟಾರೆ 5ಜಿ ಸಾಮರ್ಥ್ಯದ ಬಳಕೆ ಸುಮಾರು ಶೇ. 38 ರಷ್ಟಿದೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಪೋಸ್ಟ್ ಪೇಯ್ಡ್ ಟ್ರಾಫಿಕ್ ಪಾಲು ಕೇವಲ ಶೇ. 4 ರಷ್ಟಿದೆ. ಪ್ರಯಾರಿಟಿ ಪೋಸ್ಟ್ ಪೇಯ್ಡ್ ಗಾಗಿ ವರ್ಚುವಲ್ ಟನಲ್ (ಸ್ಲೈಸ್) ಪರಿಚಯಿಸಿದ ನಂತರ, ಇದು ಸುಮಾರು ಶೇ. 6 ಕ್ಕೆ ಏರಬಹುದು ಎಂದು ಕಂಪನಿ ಹೇಳಿದೆ.
ಪ್ರಿಪೇಯ್ಡ್ ಮತ್ತು ಇತರ ಆದ್ಯತೆಯಲ್ಲದ ಟ್ರಾಫಿಕ್ ಗಾಗಿ ಒಟ್ಟು ಸಾಮರ್ಥ್ಯದ ಸರಿಸುಮಾರು ಶೇ. 60 ರಷ್ಟು ಹೆಚ್ಚುವರಿ ಅವಕಾಶ ಇನ್ನೂ ಬಾಕಿ ಉಳಿಯುತ್ತದೆ. ಹೀಗಾಗಿ ಪ್ರಯಾರಿಟಿ ಪೋಸ್ಟ್ ಪೇಯ್ಡ್ ಸೇವೆಯು ಪ್ರಿಪೇಯ್ಡ್ ಬಳಕೆದಾರರ ಸೇವೆಗೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸುವುದಿಲ್ಲ ಮತ್ತು ಅಡ್ಡಿಪಡಿಸಲು ಸಾಧ್ಯವೂ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.



