Saturday, June 20, 2026
Google search engine
Homeರಾಜ್ಯವಿಮೆ ಹಣದ ಆಸೆಗೆ ಮಾಜಿ ಸೈನಿಕನ ಬಲಿ: ಮಗಳ ಕೃತ್ಯಕ್ಕೆ ನೊಂದು ತಾಯಿ ಆತ್ಮಹತ್ಯೆ

ವಿಮೆ ಹಣದ ಆಸೆಗೆ ಮಾಜಿ ಸೈನಿಕನ ಬಲಿ: ಮಗಳ ಕೃತ್ಯಕ್ಕೆ ನೊಂದು ತಾಯಿ ಆತ್ಮಹತ್ಯೆ

ಬೆಳಗಾವಿ: ವಿಮಾ ಹಣಕ್ಕಾಗಿ ಪತಿಯನ್ನೇ ಕೊಲೆಗೈದ ಪ್ರಕರಣದ ಮುಖ್ಯ ಆರೋಪಿ ಮಗಳನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ, ಮಗಳ ಈ ದುಷ್ಕೃತ್ಯದಿಂದ ಮನನೊಂದಿದ್ದ ಆಕೆಯ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚೆಗೆ ಮಾಜಿ ಸೈನಿಕ ಸಂದೀಪ್ ಮಂಜರಗಿ ಎಂಬವರ ನಿಗೂಢ ಸಾವು ನಡೆದಿತ್ತು. ತನಿಖೆ ನಡೆಸಿದಾಗ, ಸಂದೀಪ್ ಅವರ ಹೆಸರಿನಲ್ಲಿದ್ದ ಸುಮಾರು ಎರಡು ಕೋಟಿ ರೂಪಾಯಿಗಳ ಜೀವ ವಿಮಾ ಹಣವನ್ನು ಹೊಡೆಯಲು ಅವರ ಪತ್ನಿ ಸುಮಾ ಮಂಜರಗಿ, ತನ್ನ ಪ್ರಿಯಕರ ಪುಂಡಲೀಕನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಮಾರ್ಚ್ 13ರಂದು ಬೈಕ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಸಂದೀಪ್ ಚೇತರಿಸಿಕೊಳ್ಳುತ್ತಿದ್ದಾಗ, ಪತ್ನಿ ಸುಮಾ ಮತ್ತು ಪ್ರಿಯಕರ ಆಸ್ಪತ್ರೆಯಲ್ಲಿದ್ದ ಸಂದೀಪ್ ಅವರ ಸ್ಯಾಲೈನ್ ಬಾಟಲಿಗೆ ವಿಷ ಬೆರೆಸಿ, ಅತಿಯಾದ ನಿದ್ರೆ ಮಾತ್ರೆಗಳನ್ನು ನೀಡಿ ಮಾರ್ಚ್ 15ರಂದು ಹತ್ಯೆ ಮಾಡಿದ್ದರು. ಇದನ್ನು ಅಪಘಾತವೆಂದು ಬಿಂಬಿಸಲು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಬದಲಿಸಲು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗೆ 3 ಲಕ್ಷಕ್ಕೂ ಅಧಿಕ ಲಂಚ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಸಂದೀಪ್ ಅವರ ಸಾವಿನ ನಂತರ ವಿಮಾ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಸುಮಾ ಮತ್ತು ಪ್ರಿಯಕರ ಪುಂಡಲೀಕನ ನಡುವೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ಪುಂಡಲೀಕ, “ಅಪಘಾತವಾದ ವ್ಯಕ್ತಿ ತಕ್ಷಣ ಸತ್ತಿದ್ದು ಹೇಗೆ?” ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು, ತಕ್ಷಣ ಪುಂಡಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆಯ ಕರಾಳ ರಹಸ್ಯ ಬಯಲಾಗಿದೆ.

ಜೂನ್ 14ರಂದು ಮಗಳು ಸುಮಾಳನ್ನು ಯಮಕನಮರಡಿ ಪೊಲೀಸರು ಬಂಧಿಸಿದ ವಿಷಯ ತಿಳಿದ ತಾಯಿ ಮಹಾದೇವಿ ಬದಾಮಿ (57) ತೀವ್ರ ಆಘಾತಕ್ಕೊಳಗಾಗಿದ್ದರು. ಮಗಳ ಈ ಮಹಾಪಾಪದ ಕೃತ್ಯದಿಂದ ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದಂತಾದ ಪರಿಸ್ಥಿತಿ ನಿರ್ಮಾಣವಾದ ಕಾರಣ, ಮನನೊಂದ ತಾಯಿ ಮಹಾದೇವಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ, ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಸೇರಿದಂತೆ ಒಟ್ಟು ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments