ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಲು ಪ್ರಜಾ ಸೇವೆ ಸಚಿವಾಲಯ ರಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಮೂಲಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿಕೆ ಶಿವಕುಮಾರ್ ಘೋಷಿಸಿದ್ದ 6 ಘೋಷಣೆಗಳ ಪೈಕಿ ಎರಡನೇ ಘೋಷಣೆ ಬಗೆಹರಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತಕ್ಕಾಗಿ ಪ್ರಜಾ ಸೇವೆ ಆಡಳಿತ ಇಲಾಖೆಯನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರ ಅಹವಾಲು, ಸಮಸ್ಯೆಗಳ ಸ್ಪಂದನೆ, ಸಾರ್ವಜನಿಕರಿಗೆ ನ್ಯಾಯ ಕೊಡಲು, ಅಧಿಕಾರಿಗಳು ಹಾಗೂ ನಮ್ಮಿಂದ ಆಗುವ ತಪ್ಪುಗಳನ್ನು ತಿದ್ದಲು ಅನುವಾಗಲು ಹೊಸ ಸಚಿವಾಲಯ ಮಾಡುತ್ತಿದ್ದೇವೆ ಎಂದು ನಂತರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪ್ರಜಾಸೇವೆ ಸಚಿವಾಲಯದ ಹೊಣೆಗಾರಿಕೆಯನ್ನು ಓರ್ವ ಸಚಿವರಿಗೆ ವಹಿಸಲಾಗುವುದು. ಸಚಿವಾಲಯಕ್ಕೆ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮಾಡುತ್ತೇವೆ. ಎಲ್ಲ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ವಾರ ಕಡ್ಡಾಯವಾಗಿ 224 ಕ್ಷೇತ್ರಗಳಿಗೆ ಹೋಗಿ ಆ ತಾಲೂಕುಗಳಲ್ಲಿ ಜನಸ್ಪಂದನಾ ಸಭೆ ನಡೆಸಬೇಕು. ಅಲ್ಲಿ ಬರುವ ಅಹವಾಲುಗಳನ್ನು, ಕುಂದು ಕೊರತೆಗಳನ್ನು ಈ ಸಚಿವಾಲಯದ ಗಮನಕ್ಕೆ ತರಬೇಕು. ಜನರಹಿತ ಬಹಳ ಮುಖ್ಯ. ನಾವು ಯಾರೂ ಸರ್ವಜ್ಞರಲ್ಲ. ಜನರಿಗೆ ಹಲವು ಸಮಸ್ಯೆ ಎದುರಾಗುತ್ತವೆ. ಮಾಧ್ಯಮಗಳಲ್ಲೂ ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾರೆ. ಅದನ್ನೆಲ್ಲವನ್ನೂ ಸಮನ್ವಯತೆ ಮಾಡಿ ಸ್ಪಂದಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ದೆಹಲಿಯ ನಿವಾಸಿ ಆಯುಕ್ತರ ಕಚೇರಿ ಪುನಾರಚನೆ
ದೆಹಲಿಯ ನಿವಾಸಿ ಆಯುಕ್ತರ ಕಚೇರಿ ಕಾರ್ಯವೈಖರಿ ನಮಗೆ ಸಮಾಧಾನ ತಂದಿಲ್ಲ. ಹಾಗಾಗಿ ಅದನ್ನು ಪುನಾರಚನೆ ಮಾಡಲಾಗುವುದು. ಯಾವ ರಾಜ್ಯಗಳು ಎಷ್ಟು ಅನುದಾನಗಳ ಪ್ರಸ್ತಾವನೆಗಳನ್ನು ಕೊಂಡೊಯ್ಯುತ್ತಾರೆ ಎಂಬ ಬಗ್ಗೆ ಸಮನ್ವಯತೆ ಸಾಧಿಸಲು ಪ್ರತ್ಯೇಕ ಅಧಿಕಾರಿ ತಂಡವನ್ನು ರಚನೆ ಮಾಡಲಾಗುವುದು. ಸಂಪೂರ್ಣ ತಂಡವನ್ನು ಪುನಾರಚನೆ ಮಾಡಲಾಗುವುದು. ಇದರ ಹಿರಿಯ ಐಎಎಸ್ ಅಧಿಕಾರಿಗಳು, ಐಆರ್ಎಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳನ್ನು ತಂಡದಲ್ಲಿ ನಿಯೋಜಿಸಲಾಗುವುದು. ಇದರ ಜೊತೆಗೆ ದೆಹಲಿಯಲ್ಲಿನ ಕಾನೂನು ಸೆಲ್ ಅನ್ನು ಬಲಗೊಳಿಸಲಾಗುವುದು ಎಂದು ಅವರು ನುಡಿದರು.
ಓಸಿ, ಸಿಸಿಯಿಂದ ವಿನಾಯಿತಿ
ವಿದ್ಯುತ್ ಸಂಪರ್ಕಕ್ಕಾಗಿ 2,400 ಚ.ಅಡಿವರೆಗಿನ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಎಲ್ಲ ವಾಸದ ಮನೆಗಳಿಗೆ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದಕ್ಕೂ ಮುನ್ನ 31.5.2005ರೊಳಗೆ ಕಟ್ಟಿದ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಹಲವರು ಈ ವಿನಾಯಿತಿಯಿಂದ ಯಾವುದೇ ಅನುಕೂಲವಾಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ಹಾಗಾಗಿ 31.05.2005 ಕಟ್ ಆಫ್ ದಿನಾಂಕವನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಹಳೆ ವಾಸದ ಮನೆಗಳ ನಿರ್ಮಾಣ ಪೂರ್ಣವಾಗಿ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಈಗಾಗಲೇ ಸ್ವಾಧೀನಾನುಭವ ಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ 15 ದಿನ ಸಮಯಾವಕಾಶ ನೀಡುತ್ತೇವೆ. 15 ದಿನದಲ್ಲಿ ಅರ್ಜಿಯೊಂದಿಗೆ ಜಿಪಿಎಸ್ ಆಧಾರಿತ ಫೋಟೋ ಅಪ್ ಲೋಡ್ ಮಾಡಬೇಕು. ಅಂಥ ಅರ್ಜಿಯನ್ನು ಪರಿಗಣಿಸಿ ಒಸಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.
ರೇಷ್ಮೆ ಹುಳು ಮನೆ, ಕೊಟ್ಟಿಗೆಗಳು, ಹೈನುಗಾರಿಕೆ ಶೆಡ್ ಗಳಿಗೆ ನಾವು ಒಸಿ ಪಡೆಯುವುದರಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.



