ನವದೆಹಲಿ: ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಸಯ್ಯದ್ ಆಲಿ ಖಮೇನಿ ಅಂತ್ಯಕ್ರಿಯೆಯಿಂದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಜುಲೈ 4ರಂದು ನಡೆಯುವ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಭಾಗವಹಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ.
ಫೆ. 28ರಂದು ಅಮೆರಿಕ ಮತ್ತು ಇಸ್ತ್ರೇಲ್ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ ಇರಾನ್ ಸುಪ್ರೀಂ ನಾಯಕ ಖಮೇನಿ ಅಂತ್ಯಕ್ರಿಯೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಆಹ್ವಾನ ನೀಡಿದ್ದರು.
ಜುಲೈ 4ರಂದು ಬಹು ದಿನಗಳ ಅಂತ್ಯಕ್ರಿಯೆ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮಗಳು ದಕ್ಷಿಣ ಟೆಹ್ರಾನ್ನ ಪವಿತ್ರ ನಗರ ಕೋಮ್ನಲ್ಲಿ ನಡೆಯಲಿದೆ. ಜುಲೈ 7ರಂದು ಆಚರಣೆಗಳು ಮುಗಿಯಲಿದ್ದು, ಅಂತಿಮ ಅಂತ್ಯಕ್ರಿಯೆ ಜುಲೈ 9ರಂದು ಖಮೇನಿ ಹುಟ್ಟೂರಾದ ಆಗ್ನೇಯ ಇರಾನ್ ಮಶಾದ್ನಲ್ಲಿ ನಡೆಯಲಿದೆ.
ಇಸ್ಲಾಮಿಕ್ ನ್ಯಾಯಶಾಸ್ತ್ರವು ಸಾಮಾನ್ಯವಾಗಿ ಮೃತ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ, ಆದರ್ಶಪ್ರಾಯವಾಗಿ 24 ಗಂಟೆಗಳ ಒಳಗೆ ಸಮಾಧಿ ಮಾಡಬೇಕು ಎಂದು ತಿಳಿಸುತ್ತದೆ. ಆದರೆ, ವಿಶೇಷವಾಗಿ ಯುದ್ಧದ ಸ್ಥಿತಿಯಲ್ಲಿ ವಿನಾಯಿತಿಗಳು ಅನುಮತಿಗಳನ್ನು ನೀಡಲಾಗಿರುತ್ತದೆ.
ಖಮೇನಿ ಅಂತ್ಯಕ್ರಿಯೆ ಕುರಿತು ಫೆಬ್ರವರಿಯಿಂದಲೂ ಊಹಾಪೋಹಗಳು ಕೇಳಿ ಬರುತ್ತಿದ್ದವು. ಆರಂಭಿಕ ವರದಿಗಳ ಪ್ರಕಾರ ಜೂನ್ ಅಂತ್ಯದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿತ್ತು. ಆದರೆ, ಅಲ್ಲಿನ ಸರ್ಕಾರಿ ಮಾಧ್ಯಮಗಳು ಇದೀಗ ಜುಲೈ ವೇಳಾಪಟ್ಟಿಯನ್ನು ಅಧಿಕೃತವಾಗಿ ದೃಢಪಡಿಸಿವೆ.
ಟೆಹ್ರಾನ್, ಮಶಾದ್ ಮತ್ತು ಕೋಮ್ನಲ್ಲಿ ನಡೆಯುವ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಸುಮಾರು 20 ಮಿಲಿಯನ್ ಜನರು ಭಾಗಿಯಾಗಿ ಸಂತಾಪ ಸೂಚಿಸುವ ನಿರೀಕ್ಷೆಗಳಿವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೇರಿದಂತೆ ಅನೇಕ ವಿದೇಶಿ ಗಣ್ಯರು ಈ ಅಂತಿಮ ವಿದಾಯದ ಕಾರ್ಯಕ್ರಮದಲ್ಲಿ ಹಾಜರಾಗುವ ನಿರೀಕ್ಷೆಗಳಿವೆ.
ನಿರೀಕ್ಷಿತ ಪ್ರಮಾಣದಲ್ಲಿ ಜನರು ಅಂತ್ಯಕ್ರಿಯೆಗೆ ಆಗಮಿಸಿದರೆ, 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಆಗಮಿಸಿದ್ದ 10 ಮಿಲಿಯನ್ ಹಾಜರಾತಿಯ ದಾಖಲೆಗಳನ್ನು ಇದು ಮೀರಬಹುದು ಎಂದು ನಿರೀಕ್ಷಿಸಲಾಗಿದೆ.
ಖಮೇನಿ ಹತ್ಯೆ ಬಳಿಕ ಮಾರ್ಚ್ 8 ರಂದು ದಿವಂಗತ ನಾಯಕರ 56 ವರ್ಷದ ಪುತ್ರ ಮೊಜ್ತಾಬಾ ಹೊಸೈನಿ ಖಮೇನಿ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ನಿಖರವಾದ ಇರುವಿಕೆಯ ಬಗ್ಗೆ ವ್ಯಾಪಕ ಊಹಾಪೋಹಗಳು ಮುಂದುವರೆದಿದ್ದು, ಮಾರ್ಕೊ ರೂಬಿಯೊ ಮತ್ತು ಪೀಟ್ ಹೆಗ್ಸೆತ್ ಸೇರಿದಂತೆ ಅಮೆರಿಕದ ಪ್ರಮುಖ ಅಧಿಕಾರಿಗಳು ಅವರು ಪ್ರಸ್ತುತ ಕೋಮಾದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತಣ್ಣಗಾಗುತ್ತಿರುವ ಮಧ್ಯೆ ಈ ಆಹ್ವಾನ ಬಂದಿದೆ. ಜಾಗತಿಕ ಇಂಧನ ಮಾರ್ಗಗಳನ್ನು ಅಡ್ಡಿಪಡಿಸಿದ ಮತ್ತು ಪ್ರಮುಖ ಇಂಧನ ಬಿಕ್ಕಟ್ಟಿಗೆ ಕಾರಣವಾದ ಹಾಗೂ ತಿಂಗಳುಗಳ ತೀವ್ರ ಸಂಘರ್ಷದ ನಂತರ, ಇರಾನ್ ಮತ್ತು ಅಮೆರಿಕ ಶಾಂತಿ ಮಾತುಕತೆಗೆ ಮುಂದಾಗಿವೆ.



