Thursday, July 16, 2026
Google search engine
Homeರಾಜ್ಯಆ್ಯಂಬುಲೆನ್ಸ್ 15 ನಿಮಿಷಗಳಲ್ಲಿ ಬರದಿದ್ದರೆ 5 ಸಾವಿರ ರೂ. ದಂಡ!

ಆ್ಯಂಬುಲೆನ್ಸ್ 15 ನಿಮಿಷಗಳಲ್ಲಿ ಬರದಿದ್ದರೆ 5 ಸಾವಿರ ರೂ. ದಂಡ!

ಬೆಂಗಳೂರು: ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಜೀವದಾತನಾಗಿರುವ 108 ಆ್ಯಂಬುಲೆನ್ಸ್ ಸೇವೆಯ ಸಂಬಂಧ ರಾಜ್ಯದ ಆರೋಗ್ಯ ಇಲಾಖೆಯು ದೇಶದಲ್ಲೇ ಅತ್ಯಂತ ಕಟ್ಟುನಿಟ್ಟಾದ ನಿಯಮ ಜಾರಿಗೆ ತರಲು ಮುಂದಾಗಿದೆ.

ರೋಗಿಗಳ ಕಡೆಯಿಂದ ಕರೆ ಬಂದ ಕೇವಲ 15 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಅವರಿರುವ ಸ್ಥಳಕ್ಕೆ ತಲುಪದಿದ್ದರೆ, ಸಂಬಂಧಪಟ್ಟ ಚಾಲಕರಿಗೆ ಅಥವಾ ಏಜೆನ್ಸಿಗೆ 5 ಸಾವಿರ ರೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಚಿವರು, ತುರ್ತು ವೈದ್ಯಕೀಯ ಸೇವೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ನಿಯಮ ಅನ್ವಯವಾಗಲಿದ್ದು ಈ ಬಗ್ಗೆ ಪ್ರಮುಖ ಎಚ್ಚರಿಕೆಗಳನ್ನು ನೀಡಿದೆ.

ಆ್ಯಂಬುಲೆನ್ಸ್ ಸಿಬ್ಬಂದಿಗೆ ರೋಗಿಯಿರುವ ಸ್ಥಳವನ್ನು ತಲುಪಲು 13 ರಿಂದ ಗರಿಷ್ಠ 15 ನಿಮಿಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯ ಮೀರಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಚಾಲಕರ ವಿಳಂಬ ಧೋರಣೆಗೆ ಅವರನ್ನು ನಿಯೋಜಿಸಿರುವ ಆ್ಯಂಬುಲೆನ್ಸ್ ಏಜೆನ್ಸಿಯೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನೆಪವೊಡ್ಡಿ ಅನಗತ್ಯ ವಿಳಂಬ ಮಾಡಲು ಇನ್ನುಮುಂದೆ ಅವಕಾಶವಿಲ್ಲ. ಸಮಯ ಪಾಲನೆ ಮಾಡುವುದು ಚಾಲಕರು ಹಾಗೂ ಸೇವಾ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ಕಾರ ಮೂಲಸೌಕರ್ಯ ಬದಲಾವಣೆಗೆ ಮುಂದಾಗಿದೆ. ಪದೇ ಪದೇ ಕೈಕೊಡುವ ಹಾಗೂ ರಸ್ತೆಯಲ್ಲಿ ನಿಧಾನವಾಗಿ ಸಾಗುವ ಹಳೆಯ ಎಲ್ಲಾ 108 ಆ್ಯಂಬುಲೆನ್ಸ್ ವಾಹನಗಳನ್ನು ತಕ್ಷಣವೇ ಗುಜರಿಗೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಹಳೆಯ ವಾಹನಗಳ ಜಾಗಕ್ಕೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಆ್ಯಂಬುಲೆನ್ಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. “ತುರ್ತು ವೈದ್ಯಕೀಯ ಸೇವೆ ಎನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರಲ್ಲಿ ನಿಮಿಷಗಳ ವಿಳಂಬವೂ ಕೂಡ ಒಂದು ಜೀವಕ್ಕೆ ಕಂಟಕ ತರಬಹುದು. ಹೀಗಾಗಿ ಆ್ಯಂಬುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಈ ನಿಯಮ ತರಲಾಗಿದೆ.

ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದು ನಮ್ಮ ಆದ್ಯತೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments