ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ., ದೇವೇಗೌಡರು ನನ್ನ ಬಗ್ಗೆ ಮಾತನಾಡಿದ್ದಾರೆ. ಇದು ಅವರು ನನಗೆ ತೋರುತ್ತಿರುವ ಪ್ರೀತಿ. ನೀವು 2006ರಲ್ಲಿ ಈ ಯೋಜನೆ ಮಾಡಿದಾಗ, ಯಾವ ಹೈಕಮಾಂಡ್ ಗೆ ಮೆಚ್ಚಿಸಲು ಹೋಗಿದ್ದಿರಿ? ಅವರು ಹಾಸನದಿಂದ ಇಲ್ಲಿಗೆ ಬಂದು ಯಾವ ವರ್ಷದಲ್ಲಿ ಎಲ್ಲೆಲ್ಲಿ ಜಮೀಜು ತೆಗೆದುಕೊಂಡರು ಎಂಬ ಪಟ್ಟಿ ಬೇಕಾ?” ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅವರು ಆ ಸ್ಥಾನದಲ್ಲಿ ಕೂತಿದ್ದಾರೆ ಎಂದರು.
ಈ ಯೋಜನೆ ಆರಂಭವಾಗಿ 15 ವರ್ಷಗಳ ಬಳಿಕ 2019ರಲ್ಲಿ ಅವರ ಮೈತ್ರಿ ಪಕ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ 80 ಲಕ್ಷದಿಂದ 1 ಕೋಟಿ ಪರಿಹಾರ ನೀಡಿ 900 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡರಲ್ಲ. ಆಗ ನಿಮ್ಮ ಹೋರಾಟ, ಧ್ವನಿ ಏನಾಗಿತ್ತು? ನಿಮ್ಮ ಕಿಚ್ಚು ಏನಾಗಿತ್ತು? ಆಗ ನಿಮ್ಮ ಧರಣಿ ಯಾಕೆ ನಡೆಯಲಿಲ್ಲ? ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ನಿಮಗೆ ಈ ಛಲ ಬಂದಿದೆಯೇ? ಆ ಸಮಯದಲ್ಲಿ ಅಶೋಕಣ್ಣ ಕಂದಾಯ ಮಂತ್ರಿಯಾಗಿದ್ದರು. ಆಗ ಅಶೋಕಣ್ಣ ಅವರು ಯಾಕೆ ಧ್ವನಿ ಎತ್ತಲಿಲ್ಲ?” ಎಂದು ಪ್ರಶ್ನಿಸಿದರು.
ಡಿಎಲ್ಎಫ್ ಗೆ ಟೆಂಡರ್ ನೀಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು?
ಕುಮಾರಸ್ವಾಮಿ ಅವರು ಮಾಡಲು ಮುಂದಾಗಿದ್ದ ಟೌನ್ ಶಿಪ್ ನಲ್ಲಿ ಇಡಿ ಹಳ್ಳಿಗಳು, ಅಲ್ಲಿ ಬದುಕು ಕಟ್ಟಿಕೊಂಡಿದ್ದವರ ಮನೆಗಳನ್ನು ಸೇರಿ ಎಲ್ಲರನ್ನು ಒಕ್ಕಲೆಬ್ಬಿಸಲು ಆದೇಶ ಹೊರಡಿಸಿದ್ದರು. ಅವರದೇ ಆದ ಪರಿಹಾರ ಮಾರ್ಗಸೂಚಿ ಹೊರಡಿಸಿದ್ದರು. ನಮ್ಮಣ್ಣ ಮಾತೆತ್ತಿದರೆ ಬಿಡದಿ ಟೌನ್ ಶಿಪ್ ಅನ್ನು ರಿಯಲ್ ಎಸ್ಟೇಟ್ ಎಂದು ಹೇಳುತ್ತಾರೆ. ಅವರು ಈ ಟೌನ್ ಶಿಪ್ ನಿರ್ಮಾಣವನ್ನು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ ಗೆ ಜವಾಬ್ದಾರಿ ನೀಡಿ ಅವರಿಂದ 400 ಕೋಟಿ ರೂ. ಹಣ ಕೂಡ ಕಟ್ಟಿಸಿಕೊಂಡಿದ್ದರು. ಕುಮಾರಸ್ವಾಮಿ ಅವರು ಅನಾರೋಗ್ಯದದಲ್ಲಿದ್ದರೂ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ರೈತರಿಗೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 40% ಜಮೀನನ್ನು (ಪ್ರತಿ ಎಕರೆಗೆ ಸುಮಾರು 8 ಸಾವಿರ ಅಡಿ) ಪರಿಹಾರವಾಗಿ ನೀಡುವುದಾಗಿ ಹೇಳಿದ್ದಾರೆ. ಆಗ ಪ್ರತಿ ಎಕರೆಗೆ 22-25 ಲಕ್ಷ ಪರಿಹಾರ ನಿಗದಿ ಪಡಿಸಿದರು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದ್ದರು” ಎಂದು ದಾಖಲೆ ಸಮೇತ ವಿವರಿಸಿದರು.
ಡಿಎಲ್ಎಫ್ ಸಂಸ್ಥೆಗೆ ಪತ್ರ ಬರೆದು ಭದ್ರತಾ ಠೇವಣಿ ಕಟ್ಟಬೇಕು, 15 ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಪತ್ರ ಬರೆದು ರಿಯಲ್ ಎಸ್ಟೇಟ್ ದಂಧೆ ಮಾಡಿದವನು ನಾನಾ ಅಣ್ಣಾ? 23-09-2006ರಲ್ಲಿ ಮುಖ್ಯಮಂತ್ರಿಯಾಗಿದ್ದ ನಮ್ಮ ಅಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಂಸ್ಥೆಯವರಿಗೆ ಈ ಜಮೀನನ್ನು ಹಂತ ಹಂತವಾಗಿ ಬಿಟ್ಟುಕೊಡಬೇಕು ಎಂದು ಸೂಚಿಸಿದ್ದರು. ಇದು ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯಬೇಕಾ? ಕುಟುಂಬದ ದಂಧೆ ಎಂದು ಕರೆಯಬೇಕಾ? ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು ಅಪ್ಪಾಜಿ? ಈಗ ಯಾರ ಮೇಲೆ ಆರೋಪ ಮಾಡುತ್ತಿದ್ದೀರಾ? ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೀರಾ? ಯಾವ ರೈತರನ್ನು ಬಳಸಿಕೊಂಡು ಹೋರಾಟ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು.
ನಿಮ್ಮ ಜಮೀನು ಈ ಯೋಜನೆ ವ್ಯಾಪ್ತಿಗೆ ಬರಲಿಲ್ಲ ಯಾಕೆ?
ನಿಮ್ಮ ರಾಜಕಾರಣದ ಬದುಕಿಗೆ ಶಕ್ತಿ ತುಂಬಿದ ಜನರ ಬದುಕು, ಆಸ್ತಿಗಳನ್ನು ಕಸಿಯಲು ನೀವು ಮಾಡಿದ ಸಂಚನ್ನು ನೀವು ಎಷ್ಟು ದಿನ ಮುಚ್ಚಿಡುತ್ತೀರಿ? ಬಿಡದಿ, ದೇವಗೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನೀವು ಖರೀದಿ ಮಾಡಿರುವ ಜಮೀನಿನ ಪೈಕಿ ಈ ಟೌನ್ ಶಿಪ್ ನಲ್ಲಿ ಒಂದು ಎಕರೆಯೂ ಹೋಗದಂತೆ ನೋಡಿಕೊಂಡರಲ್ಲ. ಕೇವಲ ರೈತರ ಜಮಾನು ಮಾತ್ರ ಹೋಗುವಂತೆ ಟೌನ್ ಶಿಪ್ ಮಾಡಲಿಲ್ಲವೇ? ಇದೇ ಟೌನ್ ಶಿಪ್ ನಲ್ಲಿ ನಿಮ್ಮ ಕುಟುಂಬದವರು 36 ಎಕರೆ ಜಮೀನು ಖರೀದಿ ಮಾಡಲಿಲ್ಲವೇ? ಅಕ್ಕನವರು ಏನು ಪತ್ರ ಬರೆದಿದ್ದರು ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ. ಆ ಭಾಗದ ರೈತರು ಕಷ್ಟ ಕಾಲದಲ್ಲಿ ತನ್ನ ಜಮೀನು ಮಾರಿಕೊಳ್ಳದಂತೆ ರೆಡ್ ಜೋನ್ ಮಾಡಿದಿರಲ್ಲಾ ಇದು ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ. ಯಾವ ಜನರು ನಿಮ್ಮನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಸಂಸದರನ್ನಾಗಿ ಮಾಡಿದರೋ ಅವರಿಗೆ ಈ ರೀತಿ ಮಾಡುವುದೇ? ನೀವು ಹಾಕಿದ ಮುನ್ನುಡಿಯ ಮೇಲೆ ನಾನು ಮುನ್ನಡೆಯುತ್ತಿದ್ದೇನೆ. ಈ ವಿಚಾರದಲ್ಲಿ ಮಾತ್ರ ನಾನು ನಿಮ್ಮ ಉತ್ತರಾಧಿಕಾರಿಯಾಗಿದ್ದೇನೆ ಹೊರತು ರಾಜಕೀಯವಾಗಿ ಅಲ್ಲ. ನಿಮ್ಮ ತೀರ್ಮಾನಕ್ಕೆ ನಾನು ಬದ್ಧನಾಗಿ ನಿಮ್ಮ ಆದೇಶ ಪಾಲಿಸಿ, ನಿಮ್ಮ ಸಹಿಗೆ ಗೌರವ ನೀಡುತ್ತಿದ್ದೇನೆ. ನಿಮ್ಮ ಚಿಂತನೆ, ಸಂತೋಷವನ್ನು ನಾನು ಮುಂದುವರಿಸುತ್ತಿದ್ದೇನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ನೀವು ಮಾಡಿದ ಆಲೋಚನೆಯನ್ನು ನಾನು ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಿಡದಿ ಟೌನ್ ಶಿಪ್ ಮುನ್ನ ಕೈಗಾರಿಕ ಪ್ರದೇಶ ಮಾಡಿದಿರಿ. ಆಗ ನಿಮ್ಮ ಬೀಗರೇ ಕೆಐಎಡಿಬಿಯಲ್ಲಿ ಅಧಿಕಾರಿಯಾಗಿದ್ದರು. ಆಗ ನಿಮ್ಮ ಕೇತಗಾನಹಳ್ಳಿ ಜಮೀನು ಭೂಸ್ವಾಧೀನವಾಗಲಿಲ್ಲ. ನಿಮ್ಮ ಭೂಮಿ ಸ್ವಾಧೀನವಾಗದಂತೆ ಪಕ್ಕದಲ್ಲಿ ಒಂದು ವಿಶೇಷ ರಸ್ತೆ ನಿರ್ಮಿಸಿ ಕೈಗಾರಿಕಾ ಪ್ರದೇಶ ಮಾಡಿದಿರಿ. ಶಾನಮಂಗಲ, ಹಾರೋಹಳ್ಳಿಯಲ್ಲಿ ಕೈಗಾರಿಕಾ ಟೌನ್ ಶಿಪ್ ಮಾಡಿದಿರಿ. ಅಲ್ಲಿ ನೀವು ಕೊಟ್ಟ ಪರಿಹಾರ ಮೊತ್ತ ಆರೂವರೆ ಲಕ್ಷ, 16 ಲಕ್ಷ, 25 ಲಕ್ಷ, 40 ಲಕ್ಷ. ಕೊನೆ ಹಂತದಲ್ಲಿ 1 ಕೋಟಿ ನೀಡಿದಿರಿ ಎಂದರು.
ನಾನು ಸಿಎಂ ಆದ ಮೇಲೆ ಬಂದ ಛಲ, ಯಡಿಯೂರಪ್ಪ ಸರ್ಕಾರದ ತೀರ್ಮಾನದ ವಿರುದ್ಧ ಇರಲಿಲ್ಲ ಯಾಕೆ?
ರೈತರ ಬಗ್ಗೆ ಇಷ್ಟು ಕಾಳಜಿ ಇರುವವರು ಟೌನ್ ಶಿಪ್ ಯಾಕೆ ಮಾಡಿದರು. ಕೈಗಾರಿಕಾ ಪ್ರದೇಶಕ್ಕೆ ಕೇತಗಾನಹಳ್ಳಿ, ದೇವಗೆರೆಯನ್ನು ಯಾಕೆ ಸೇರಿಸಿಕೊಳ್ಳಲಿಲ್ಲ? ಎಲ್ಲೆಲ್ಲಿ ಏನಾಗಿದೆ ಎಂದು ಬೇರೆ ದಿನ ಮಾತನಾಡುತ್ತೇನೆ. ದಯವಿಟ್ಟು ನನ್ನನ್ನು ಕೆಣಕಬೇಡಿ. ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ. ನಿಮಗೆ ಶುಭವಾಗಲಿ. ಇದು ನನ್ನ ಕನಸಿನ ಯೋಜನೆಯಲ್ಲ, ನಿಮ್ಮ ಯೋಜನೆ, ಅದಕ್ಕೆ ನೀವು ಬರೆದ ಮುನ್ನುಡಿ ನಾನು ಮುಂದುವರಿಸುತ್ತಿದ್ದೇನೆ. ನಮ್ಮದು ಸರ್ಕಾರದ ಯೋಜನೆ, ಯಾವುದೇ ಖಾಸಗಿಯವರಿಗೆ ನೀಡುವುದಿಲ್ಲ. ದಂಧೆ ಮಾಡುವುದಿಲ್ಲ.
ಇದಕ್ಕೆ ಸಣ್ಣ ಸಮಿತಿ ಮಾಡುತ್ತೇನೆ. ಶಾಸಕರು, ಅಧಿಕಾರಿಗಳು ನ್ಯಾಯಾಧೀಶರನ್ನು ಸೇರಿಸಿಕೊಳ್ಳಬೇಕೆ ಎಂದು ತೀರ್ಮಾನಿಸಿ ಮುಂದಿನ ಎರಡು ಮೂರು ತಿಂಗಳಲ್ಲಿ ಸಮಿತಿ ಮಾಡುತ್ತೇನೆ. ಅವರು ವರದಿ ನೀಡಲಿ. ನನಗೆ ಯಾವುದೇ ಆತುರವಿಲ್ಲ. ಡಿಕೆ ಮುಖ್ಯಮಂತ್ರಿ ಆಗಿಹೋದನಲ್ಲಾ ಎಂದು ಅಸೂಯೆ ನಿಮ್ಮನ್ನು ಕಾಡುತ್ತಿದೆ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ವರದಿ ಬರುವವರೆಗೂ ನಾನು ಕಾಯುತ್ತೇನೆ. ಇದು ನನಗೂ ರೈತರಿಗೂ ಇರುವ ಸಂಬಂಧ.
ಅಧಿಕಾರಿಗಳಿಗೆ ಪೊರಕೆಯಲ್ಲಿ ಹೊಡೆಯಬೇಡಿ
2019ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬೆಂಗಳೂರು ಸಮೀಪದಲ್ಲಿ ಬಂಡವಾಳ ಹೂಡಿಕೆಗೆ ಸಹಾಯವಾಗಲು ಬಿಡದಿಯ 9000 ಎಕರೆ ಜಾಗ ಸೂಕ್ತವಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರರದಿ ತರಿಸಿಕೊಂಡರು. ಆಗ 35%ರಷ್ಟು ಕೈಗಾರಿಕೆ, 30% ವಸತಿ, ಉಳಿದ ಪ್ರದೇಶವನ್ನು ಇತರೆ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ್ದರು. ಇಳಿ ವಯಸ್ಸಿನಲ್ಲಿ ಗಾಂಧಿ ಪ್ರತಿಮೆ ಬಂದು ಧರಣಿ ಕೂರಿಸಿ, ಅವರ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ. ನಮ್ಮ ತಾಯಂದಿರು ಯಾವ ಅಧಿಕಾರಿಗಳಿಗೆ ಪೊರಕೆ ಏಟು ಹೊಡೆಯುವ ಅಗತ್ಯವಿಲ್ಲ. ನಾನು ಅವರ ಬದುಕಿಗೆ ಕೈಹಾಕಿ ತಪ್ಪು ಮಾಡಿದ್ದರೆ, ಅವರು ನನಗೆ ಬೇಕಾದರೆ ಹೊಡೆಯಲಿ, ನಾನು ಹೊಡೆಸಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದರು.



