ಬೆಂಗಳೂರು:ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಬ್ರಾಯ್ಲರ್ ಕೋಳಿಗಳು ಅಪಘಾತದಲ್ಲಿ ಸಾವಿಗೀಡಾದರೆ, ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪಘಾತದ ವೇಳೆ ವಾಹನದಲ್ಲಿದ್ದ ಕೋಳಿಗಳಿಗೆ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ಮಾಲೀಕ ಕೆ.ವೀರನಾರಾಯಣ ಸ್ವಾಮಿ ಮತ್ತು ಕೋಳಿಗಳಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಮೃತ ಕೋಳಿಗಳಿಗೂ ವಿಮಾ ಕಂಪನಿಯು ಪರಿಹಾರ ನೀಡುವ ಬಾಧ್ಯಸ್ಥನಾಗಿರಲಿದೆ ಎಂದು ಪೀಠ ಹೇಳಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 2(13) ರ ಪ್ರಕಾರ ‘ಸರಕು’ ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳೂ ಸಹ ಜೀವವಿರುವ ಪ್ರಾಣಿ/ಪಕ್ಷಿಗಳಾಗಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.
ಅಲ್ಲದೆ, ಬಳ್ಳಾರಿಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ 4,51ಲಕ್ಷ ರೂಗಳ ಪರಿಹಾರ ಮೊತ್ತವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ನ್ಯಾಯಾಧಿಕರಣ ವಿಧಿಸಿದ್ದ ಶೇ.7ರಷ್ಟು ಬಡ್ಡಿದರವನ್ನು ಶೇ.6ಕ್ಕೆ ಇಳಿಸಿ ಆದೇಶಿಸಿದೆ. ಇದೇ ವೇಳೆ, ಹೆಚ್ಚುವರಿ ಪರಿಹಾರ ಕೋರಿ ಕೆ.ವೀರ ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಬಳ್ಳಾರಿಯ ಆಂಧ್ರಹಾಳ ಗ್ರಾಮದ ‘ಬಾಲಾಜಿ ಪೌಲ್ಟ್ರಿ ಫಾರ್ಮ್’ ಮಾಲೀಕ ಕೆ.ವೀರ ನಾರಾಯಣಸ್ವಾಮಿ 2013ರ ಜೂನ್ 18ರಂದು ಚಳ್ಳಕೆರೆ ಪೌಲ್ಟ್ರಿ ಫಾರ್ಮ್‌ನಿಂದ 2,250 ಬ್ರಾಯ್ಲರ್ ಕೋಳಿಗಳನ್ನು ಖರೀದಿಸಿ ಐಚರ್ ವಾಹನದಲ್ಲಿ ಸಾಗಿಸುತ್ತಿದ್ದರು. ಜೂನ್ 19ರಂದು ಮುಂಜಾನೆ 4 ಗಂಟೆ ಸುಮಾರಿಗೆ ಅಯ್ಯಗರಲಪಳ್ಳಿ – ಸೆಟ್ಟೂರು ರಸ್ತೆಯಲ್ಲಿ ವಾಹನ ಅಪಘಾತಕ್ಕೀಡಾಗಿ ಪಲ್ಟಿಯಾಯಿತು. ಪರಿಣಾಮ, ಸುಮಾರು 2,000 ಕೋಳಿಗಳು ಸ್ಥಳದಲ್ಲೇ ಸಾವಿಗೀಡಾದವು ಮತ್ತು 250 ಕೋಳಿಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗಿದ್ದರು.
ಅಪಘಾತದಲ್ಲಿ ಆದ ನಷ್ಟಕ್ಕಾಗಿ 5,90,000 ರೂ.ಗಳ ಪರಿಹಾರ ನೀಡಬೇಕು ಎಂದು ಕೋರಿ ವೀರ ನಾರಾಯಣಸ್ವಾಮಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕೋಳಿಗಳಿಗೂ ಪರಿಹಾರ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಮತ್ತು ಹೆಚ್ಚುವರಿ ಪರಿಹಾರ ಕೋರಿ ವೀರನಾರಾಯಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು



