ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿ ತುಂಗಭದ್ರಾ ನದಿಗೆಸೆದಿರುವ ಘಟನೆ ದಾವಣಗೆರೆ ತಾಲೂಕು ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ಶೃತಿ ಹಾಗೂ ಪ್ರಿಯಕರ ಉಬೇದುಲ್ಲಾ ಸೇರಿ ರಘು (36) ಅವರನ್ನು ಕೊಲೆ ಮಾಡಿದ್ದು, ಅವರನ್ನು ಬಂಧಿಸಲಾಗಿದೆ. ಅಲ್ಲದೆ, ಉಬೇದುಲ್ಲಾನ ಸ್ನೇಹಿತ ಸುರೇಶ್ ಎಂಬಾತ ಕೊಲೆಗೆ ಸಹಾಯ ಮಾಡಿದ್ದಾನೆ ಎಂದು ಹದಡಿ ಠಾಣೆ ಪಿಎಸ್ಐ ತಿಳಿಸಿದ್ದಾರೆ.
ಕಳೆದ 12 ವರ್ಷಗಳ ಹಿಂದೆ ರಘು ಹಾಗೂ ಶೃತಿ ಮದುವೆಯಾಗಿದ್ದರು. ರಘು ಮದ್ಯಪಾನ ಮಾಡುತ್ತಿದ್ದ ಕಾರಣ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಮಧ್ಯೆ ಶೃತಿ ಹಾಗೂ ಉಬೇದುಲ್ಲಾ ನಡುವೆ 2-3 ವರ್ಷಗಳಿಂದ ವಿವಾಹೇತರ ಸಂಬಂಧ ಬೆಳೆದಿತ್ತು. ಶೃತಿಗೆ ರಘುವಿನೊಂದಿಗೆ ಸಂಸಾರ ನಡೆಸಲು ಕಿರಿಕಿರಿ ಆಗುತ್ತಿತ್ತು ಎಂದು ಪಿಎಸ್ಐ ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಮತ್ತೊರ್ವ ಆರೋಪಿ ಸುರೇಶ್ ಹಾಗೂ ತುಂಗಭದ್ರಾ ನದಿಗೆ ಎಸೆಯಲಾಗಿರುವ ಮೃತದೇಹಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



