ಬೆಳಗಾವಿ: ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಗನ್ ಮ್ಯಾನ್ ಹಣ ದುಪ್ಪಟ್ಟು ಮಾಡುವ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ದರೋಡೆಗೆ ಯತ್ನಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಗನ್ಮ್ಯಾನ್ ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗನ್ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್, ರಾಘವೇಂದ್ರ ಕೊಪ್ಪದ್ ಹಾಗೂ ರಾಮಪ್ಪ ತಳವಾರ ಎಂದು ಗುರುತಿಸಲಾಗಿದೆ. ಈ ಘಟನೆ ಅಕ್ಟೋಬರ್ 30ರಂದು ಮೂಡಲಗಿ ಪಟ್ಟಣದಲ್ಲಿ ನಡೆದಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಮಿಷ ಒಡ್ಡಿ ವಂಚನೆಗೆ ಸಂಚು:ಹಿಂದೆ ‘ಶಿವಂ ಅಸೋಸಿಯೇಟ್’ ಎಂಬ ಸಂಸ್ಥೆಯಲ್ಲಿ ಹಣ ಕಳೆದುಕೊಂಡಿದ್ದ ಕಲ್ಮೇಶ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿದ್ದ ಗನ್ಮ್ಯಾನ್ ಚಿದಾನಂದ ಕುರಬೆಟ್, ಕಳೆದುಕೊಂಡ ಹಣವನ್ನು ಭರ್ತಿ ಮಾಡಿಕೊಡುವುದಾಗಿ ನಂಬಿಸಿದ್ದ. ಪ್ರತಿ 1 ಲಕ್ಷ ರೂಪಾಯಿಗೆ 30 ಸಾವಿರ ರೂಪಾಯಿ ಹೆಚ್ಚುವರಿ ಲಾಭ ನೀಡುವುದಾಗಿ ಹಾಗೂ ಹಣ ನೀಡಿದರೆ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ಆಮಿಷ ಒಡ್ಡಿದ್ದ.
ಗನ್ಮ್ಯಾನ್ ಮಾತು ನಂಬಿದ ಕಲ್ಮೇಶ್, ವಿವಿಧ ಬ್ಯಾಂಕ್ಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ನೇಹಿತರಿಂದ ಒಟ್ಟು 2.68 ಕೋಟಿ ರೂಪಾಯಿ ಸಂಗ್ರಹಿಸಿದ್ದರು. ಹಣ ಸಂಗ್ರಹವಾದ ವಿಷಯ ತಿಳಿದ ಚಿದಾನಂದ ಹಾಗೂ ಆತನ ತಂಡ, ಹಣ ಎಣಿಕೆ ಮಾಡುವ ನೆಪದಲ್ಲಿ ಕಲ್ಮೇಶ್ ಅವರನ್ನು ನಿರ್ಜನ ಶೆಡ್ಗೆ ಕರೆಸಿಕೊಂಡಿದೆ.
ಖಾರದ ಪುಡಿ ಎರಚಿ ದರೋಡೆಗೆ ಯತ್ನ:
ಕಲ್ಮೇಶ್ ಹಣದೊಂದಿಗೆ ಶೆಡ್ಗೆ ಆಗಮಿಸುತ್ತಿದ್ದಂತೆ, ಚಿದಾನಂದ ನೇತೃತ್ವದ ಗ್ಯಾಂಗ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಕಲ್ಮೇಶ್ ತಮ್ಮ ಜೊತೆ ಬಂದಿದ್ದ ಯುವಕರನ್ನು ಶೆಡ್ ಹೊರಭಾಗದಲ್ಲಿ ಕಾವಲಿಗೆ ನಿಲ್ಲಿಸಿದ್ದರು. ದರೋಡೆ ಯತ್ನವನ್ನು ಗಮನಿಸಿದ ಯುವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗನ್ಮ್ಯಾನ್ ಅಮಾನತು, ಹಣ ಜಪ್ತಿ:
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳಿಂದ 2.39 ಕೋಟಿ ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಾಕಿ ಹಣ ಹಾಗೂ ಆತನ ಪತ್ತೆಗೆ ಜಾಲ ಬೀಸಲಾಗಿದೆ.
ಶಾಸಕ ರಮೇಶ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್-ಪಿ) ಕೆ. ರಾಮರಾಜನ್ ಅವರು ಆತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
