ಬೆಂಗಳೂರು: ಹಾಡಹಗಲೇ 7.11 ಕೋಟಿ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಮತ್ತಿಬ್ಬರು ದರೋಡೆಕೋರರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವ ಮೂಲಕ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಜಿತೇಶ್ ಹಾಗೂ ದಿನೇಶ್ ಅವರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತೆ ಆಗಿದೆ. ದರೋಡೆ ಮಾಡಿದ 7.11 ಕೋಟಿ ರೂ. ಹಣದಲ್ಲಿ 6.45 ಕೋಟಿ ವಶಪಡಿಸಿಕೊಳ್ಳಲಾಗಿದ್ದು, 85 ಲಕ್ಷ ಹಣದ ಶೋಧ ಕಾರ್ಯ ನಡೆದಿದೆ.
ಬಂಧಿತರ ಪೈಕಿ ರವಿ ಹಾಗೂ ರಾಕೇಶ್ ಸಹೋದರರು. ದರೋಡೆಗೆ ಇವರೇ ಪ್ರಮುಖ ಸೂತ್ರದಾರರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದರೋಡೆ ಹೇಗೆ ಮಾಡಬೇಕೆಂಬ ಬಗ್ಗೆ ಯೋಜನೆ ರೂಪಿಸಲು ಕಾನ್ಸ್ ಟೇಬಲ್ ಅಣ್ಣಪ್ಪನಾಯಕ್, ಕ್ಸೇವಿಯರ್, ಗೋಪಿ, ರವಿ ಹಾಗೂ ರಾಕೇಶ್ ಜೊತೆ ಇತರರು ಬಾರ್‌ನಲ್ಲಿ ಸೇರಿಕೊಂಡು ಚರ್ಚೆ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತ(ಡಿಸಿಪಿ) ರ ಕಚೇರಿಯನ್ನು ಸೋಮವಾರ ಉದ್ಘಾಟಿಸಿದ ನಂತರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು,ಉಳಿದ ಹಣ ಪತ್ತೆಗೆ ಶೋಧ ನಡೆಸಲಾಗಿದೆ ಎಂದರು.
ಕೃತ್ಯ ನಡೆದ ಕೇವಲ 60 ಗಂಟೆಯೊಳಗೆ ಬೇಧಿಸಿ ಕಾನ್ಸ್ ಟೇಬಲ್,ಸೇರಿ ಆರು ಮಂದಿಯನ್ನು ಬಂಧಿಸಿ 6 ಕೋಟಿ 45 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ, ಪ್ರಮುಖ ಆರೋಪಿಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ನನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಎಂದು ಹೇಳಿದರು.
ವಿಶೇಷ ಪೊಲೀಸ್ ತಂಡಗಳು ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ಕೈಗೊಂಡು 6.29 ಕೋಟಿ ಹಣವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಉಳಿದ 82 ಲಕ್ಷ ಹಣಕ್ಕಾಗಿ ಶೋಧ ನಡೆಸುತ್ತಿವೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರೆಸಿದ್ದು, ಆಂಧ್ರಪ್ರದೇಶ, ಚೆನ್ನೈ, ತೆಲಂಗಾಣದಲ್ಲಿ ಕಾರ್ಯಾಚರಣೆ ಕೈಗೊಂಡಿವೆ.
ಎಟಿಎಂಗೆ ಹಣ ತುಂಬುವ ಸಿಎಂಎಸ್ ಸಂಸ್ಥೆ ವಾಹನದಲ್ಲಿನ ಹಣವನ್ನು ದೋಚಲು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದ ಆರೋಪಿ ರಾಕೇಶ್‌ಎಂಬಾತ ತಾನು ಸಿಕ್ಕಿ ಬೀಳುವ ಭಯದಲ್ಲಿ ರಾತ್ರೋರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ನ.19 ರಂದು ದರೋಡೆಗೆ ಸಂಚು ರೂಪಿಸಿ ಅದರಂತೆ ಅಂದು ಮಧ್ಯಾಹ್ನ ಹಾಡಹಗಲೇ ಸಾರ್ವಜನಿಕರು ಸಂಚರಿಸುತ್ತಿದ್ದಾಗಲೇ ಆರೋಪಿಗಳ ಪೈಕಿ ಕ್ಸೇವಿಯರ್ ಬಾಡಿಗೆಗೆ ಪಡೆದಿದ್ದ ಇನೋವಾ ಕಾರಿನಲ್ಲಿ ಹಣ ದರೋಡೆ ಮಾಡಿ ಸಹಚರರೊಂದಿಗೆ ಪರಾರಿಯಾಗಿದ್ದನು. ಈ ದರೋಡೆ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕಾರಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಎಲ್ಲೆಲ್ಲಿ ಕಾರು ಹೋಗುತ್ತಿದೆ ಎಂಬುವುದರ ಬಗ್ಗೆ ಮಾಲೀಕರು ಮಾಹಿತಿ ನೀಡಿದ್ದರಿಂದ ಅತೀ ಕಡಿಮೆ ಅವಧಿಯಲ್ಲಿ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕುದುರೆ ರೇಸ್ ಮುಂತಾದ ಜೂಜಿನಲ್ಲಿ ಸಾಕಷ್ಟು ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಸಾಲದಿಂದ ಹೊರಗೆ ಬರಲು ಆರೋಪಿಗಳು ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.



