ಚೆನ್ನೈ: ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಮುನ್ನಡೆಸುವ ಜವಾಬ್ದಾರಿ ಪಡೆದಿದ್ದ ಕೆ.ಅಣ್ಣಾಮಲೈ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ.
ಕಳೆದ 6 ವರ್ಷಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಲು ಹೋರಾಟ ನಡೆಸಿದ್ದ ಅಣ್ಣಾಮಲೈ ಬಿಜೆಪಿ ತೊರೆದು ತಮ್ಮದೇ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ.
ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಇನ್ನಿತರೆ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಬಿಜೆಪಿ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಅಲ್ಲದೇ ಅಣ್ಣಾಮಲೈ ವಿರೋಧದ ನಡುವೆಯೂ ಎಐಎಡಿಎಂಕೆ ಪಕ್ಷದ ಜೊತೆ ಬಿಜೆಪಿ ವರಿಷ್ಠರು ಮೈತ್ರಿ ಮಾಡಿಕೊಂಡಿದ್ದರು.
ಅಣ್ಣಾಮಲೈ 6 ವರ್ಷಗಳ ಕಾಲ ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳ ಮೂಲಕ ಪಕ್ಷವನ್ನು ಸಂಘಟಿಸಿದ್ದರು. ಆದರೆ ನಟ ಜೋಸೆಫ್ ವಿಜಯ್ ಕೆಲವೇ ತಿಂಗಳ ಹಿಂದೆ ರಾಜಕೀಯ ಪ್ರವೇಶಿಸಿದರೂ ಅವರ ನೇತೃತ್ವದ ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತ್ತು.
ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಚಿತ್ರಣದ ಹಿನ್ನೆಲೆಯಲ್ಲಿ ಅಣ್ಣಾಮಲೈ ಸ್ವಂತ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.



