Monday, June 1, 2026
Google search engine
Homeಕಾನೂನುಬಿಜೆಪಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್: ಜಾತಿ ನಿಂದನೆ ಪ್ರಕರಣದಲ್ಲಿ ದೋಷಮುಕ್ತಿ

ಬಿಜೆಪಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್: ಜಾತಿ ನಿಂದನೆ ಪ್ರಕರಣದಲ್ಲಿ ದೋಷಮುಕ್ತಿ

ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ(ಎಸ್ಸಿಎಸ್ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣದ ಸಂಬಂಧ ರಾಜರಾಜೇಶ್ವರಿನಗರದ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆರೋಪಮುಕ್ತಗೊಳಿಸಿ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಆದೇಶಿಸಿದೆ.

ಪ್ರಕರಣ ಸಂಬಂಧ ದಾಖಲಾಗಿದ್ದ ಆರೋಪಪಟ್ಟಿಯನ್ನು ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಘಟನೆಯು ಕಳೆದ 2024 ಮೇ 18ರಂದು ಅರ್ಜಿದಾರ ಆರೋಪಿತರ ಮನೆಯಲ್ಲಿ ತನ್ನ ಕ್ಷೇತ್ರದ ಗುತ್ತಿಗೆದಾರರ ಸಭೆ ನಡೆದ ಸಂದರ್ಭದಲ್ಲಿ ದೂರುದಾರರ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ಇದು ಆಪಲ್‌ ವಾಚ್‌ನಲ್ಲಿ ರೆಕಾರ್ಡ್‌ ಆಗಿದೆ. ಈ ಅಂಶ 2024ರ ಸೆಪ್ಟಂಬರ್‌ 13ರಂದು ದೂರುದಾರರಿಗೆ ತಿಳಿದಿದ್ದು, ದೂರು ದಾಖಲಿಸಲಾಗಿದೆ.

ಆದರೆ, ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಾದರೆ, ಅಂತಹ ಜಾತಿನಿಂದನೆ ಘಟನೆ ಸಾರ್ವಜನಿಕ ಸ್ಥಳದಲ್ಲಿ ನಡೆಯಬೇಕು ಎಂಬುದಾಗಿದೆ. ಆದರೆ, ಈ ಪ್ರಕರಣ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ. ಜತೆಗೆ, ಘಟನೆ ನಡೆದ ಹಲವು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದ್ದು, ಆರೋಪಿ ಮುನಿರತ್ನ ಅವರನ್ನು ಆರೋಪ ಮುಕ್ತಗೊಳಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದರು.

ಅರ್ಜಿದಾರರ ವಿರುದ್ಧದ ಆರೋಪಗಳು ಅನುಮಾನಕ್ಕೆ ಕಾರಣವಾಗುತ್ತಿವೆ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿ ಮತ್ತು ಸಾಕ್ಷ್ಯಾಧಾರಗಳಿಂದ ಆರೋಪವನ್ನು ಸಾಬೀತು ಪಡಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಆರೋಪಿತ ಜಾತಿ ನಿಂದನೆ ನಡೆದ ಸಂದರ್ಭದಲ್ಲಿ ದೂರುದಾರ ವೇಲು ನಾಯ್ಕರ್ ಸ್ಥಳದಲ್ಲೇ ಹಾಜರಿರಲಿಲ್ಲ. ನ್ಯಾಯಾಲಯವು ಸುಪ್ರೀಂ ಕೋರ್ಟ್​ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಸಾಬೀತಾಗಬೇಕಾದರೆ ಜಾತಿ ನಿಂದನೆ ಸಾರ್ವಜನಿಕರು ನೋಡುವಂತಹ ಸ್ಥಳದಲ್ಲಿ ನಡೆಯಬೇಕು ಹಾಗೂ ಅವಮಾನಕ್ಕೊಳಗಾದ ವ್ಯಕ್ತಿಯೂ ಅಲ್ಲಿ ಹಾಜರಿರಬೇಕು ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಆ ಎರಡೂ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಅದೇ ರೀತಿ ಭಾರತೀಯ ದಂಡ ಸಂಹಿತೆಯ 504 ಮತ್ತು 506ನೇ ಕಲಂಗಳಡಿ ದಾಖಲಿಸಲಾಗಿದ್ದ ಉದ್ದೇಶಪೂರ್ವಕ ಅವಮಾನ ಹಾಗೂ ಜೀವ ಬೆದರಿಕೆ ಆರೋಪಗಳಿಗೂ ಅಗತ್ಯ ಅಂಶಗಳು ದಾಖಲೆಗಳಲ್ಲಿ ಕಾಣುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ದೂರುದಾರರಿಗೆ ಘಟನೆಯ ಮಾಹಿತಿ ಸುಮಾರು ನಾಲ್ಕು ತಿಂಗಳ ಬಳಿಕ ತಿಳಿದಿರುವುದರಿಂದ ಭಯ ಅಥವಾ ಆತಂಕ ಉಂಟುಮಾಡುವ ಉದ್ದೇಶ ಸಾಬೀತಾಗುವುದಿಲ್ಲ ಎಂದು ಹೇಳಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಆರೋಪಿಯಾಗಿದ್ದ ಮುನಿರತ್ನ ಅವರ ಕ್ಷೇತ್ರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಅಲ್ಲದೆ ಪ್ರತಿ ತಿಂಗಳ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ದೂರುದಾರ ವೇಲು ನಾಯ್ಕರ್‌ ಅವರು ಅಲ್ಲಿನ ಗುತ್ತಿಗೆದಾರ ಚಲವರಾಜು ಅವರಿಗೆ ಲಂಚ ನೀಡದಂತೆ ಒತ್ತಡ ಹಾಕಿದ್ದರು. ಇದರಿಂದ ವೇಲು ನಾಯ್ಕರ್‌ ವಿರುದ್ಧ ಮುನಿರತ್ನ ಕೋಪಗೊಂಡಿದ್ದರು.

ಈ ನಡುವೆ ಗುತ್ತಿಗೆದಾರರೊಂದಿಗೆ ನಡೆದ ಸಭೆಯ ಬಳಿಕ ವೇಲು ನಾಯ್ಕರ್‌ ಅವರ ಜಾತಿಯನ್ನು ಬಳಸಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದರು. ಈ ಸಂಬಂಧ ಮನಿರತ್ನ ವಿರುದ್ಧ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಮುನಿರತ್ನ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಆರೋಪ ಪಟ್ಟಿಯಲ್ಲಿ, ಗುತ್ತಿಗೆದಾರರ ಸಭೆಯ ವೇಳೆ ಮುನಿರತ್ನ ಅವರು ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಕುರಿತು ಜಾತಿ ನಿಂದನೆ ಮಾಡಿದ್ದಾರೆ ಹಾಗೂ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಈ ಅಂಶ ಮೊಬೈಲ್​ನಲ್ಲಿ ರೆಕಾರ್ಡ್‌ ಆಗಿತ್ತು ಎಂದು ತನಿಖಾಧಿಕಾರಿಗಳು ವಿವರಿಸಿದ್ದರು. ಇದರಿಂದ ಪ್ರಕರಣದಲ್ಲಿ ತಮ್ಮನ್ನು ಆರೋಪ ಮುಕ್ತರನ್ನಾಗಿಸಲು ಕೋರಿ ಅರ್ಜಿ ಸಲ್ಲಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments