ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೊಡಿಯಾ ವಿರುದ್ಧದ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗ ಪ್ರಕರಣದಿಂದ ರೋಸ್ ಅವೆನ್ಯೂ ಕೋರ್ಟ್ ನಿರ್ದೋಷಿ ಎಂದು ಆದೇಶ ನೀಡಿದ್ದು, ಪ್ರಕರಣ ದಾಖಲಿಸಿದ್ದ ಸಿಬಿಐಗೆ ಚಾಟಿ ಬೀಸಿದೆ.
ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಕುರಿತು ಅನುಮಾನದ ಮೇಲೆ ಆರೋಪಗಳ ರಾಶಿ ಹೊರಿಸಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಮೇಲೆ ಗುರುತರ ಆರೋಪ ಹೊರಿಸಿದ್ದಕ್ಕಾಗಿ ಸಿಬಿಐ ಅನ್ನು ರೋಸ್ ಅವೆನ್ಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೇಜ್ರಿವಾಲ್ ಮತ್ತು ಸಿಸೊಡಿಯಾ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಿಬಿಐ ಸಂಪೂರ್ಣ ವಿಫಲವಾಗಿದೆ. ಕೇವಲ ಅನುಮಾನಗಳ ಆಧಾರದ ಮೇಲೆ ಆರೋಪ ಹೊರಿಸಿ ಚಾರಿತ್ರ್ಯವಧೆ ಮಾಡಲು ಯತ್ನಿಸಿದ್ದಕ್ಕಾಗಿ ಸಿಬಿಐ ವಿರುದ್ಧ ಕಿಡಿಕಾರಿದೆ.
ರಾಜಕೀಯ ಕಾರಣಕ್ಕಾಗಿ ಮೋದಿ ಹಾಗೂ ಅಮಿತ್ ಶಾ ತಮ್ಮ ವಿರುದ್ಧ ಅತೀ ದೊಡ್ಡ ಷಡ್ಯಂತ್ರ ರೂಪಿಸಿದ್ದರು. ದೇವರು ಇಂದು ನ್ಯಾಯ ಕೊಡಿಸಿದ್ದಾನೆ ಎಂದು ಭಾವುಕರಾಗಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದರು.
ಪ್ರಕರಣದ ಹಿನ್ನೆಲೆ
ಸಿಬಿಐ 2022 ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು. ನಂತರ ಬಹು ಪೂರಕ ಚಾರ್ಜ್‌ಶೀಟ್‌ಗಳನ್ನು ಕೋರ್ಟ್ ಗೆ ಸಲ್ಲಿಸಲಾಯಿತು. ರದ್ದಾದ ಅಬಕಾರಿ ನೀತಿಯನ್ನು ತನ್ನ ಪರವಾಗಿ ಪ್ರಭಾವಿಸಲು ದಕ್ಷಿಣದ ಲಾಬಿಯೊಂದು 100 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಏಜೆನ್ಸಿ ಇದರಲ್ಲಿ ಆರೋಪಿಸಿತ್ತು.
ಒಟ್ಟಾರೆಯಾಗಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಕೆ. ಕವಿತಾ, ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯಿನ್‌ಪಲ್ಲಿ, ಅರುಣ್ ರಾಮಚಂದ್ರ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಅಮನ್‌ದೀಪ್ ಸಿಂಗ್ ಧಾಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರ್ನಾಟ್ಲಾ, ರಾಕೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಚಾನ್‌ಪ್ರೀತ್ ಸಿಂಗ್ ರಾಯತ್, ಅರವಿಂದ್ ಕುಮಾರ್ ಸಿಂಗ್, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಮಾಥುರ್ ಮತ್ತು ಪಿ. ಶರತ್ ಚಂದ್ರ ರೆಡ್ಡಿ ಸೇರಿದಂತೆ 23 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ವಾದಗಳ ಸಮಯದಲ್ಲಿ ಕ್ರಿಮಿನಲ್ ಪಿತೂರಿಯ ಅಪರಾಧವನ್ನು ಸಂಪೂರ್ಣವಾಗಿ ನೋಡಬೇಕು ಮತ್ತು ವಿಚಾರಣೆಯ ಸಮಯದಲ್ಲಿ ಸಾಕ್ಷ್ಯಗಳ ಸಮರ್ಪಕತೆಯನ್ನು ಪರೀಕ್ಷಿಸಬೇಕು ಎಂದು ಸಿಬಿಐ ವಾದಿಸಿತ್ತು. ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಡಿ.ಪಿ. ಸಿಂಗ್ ಮತ್ತು ವಕೀಲ ಮನು ಮಿಶ್ರಾ ವಾದ ಮಂಡನೆ ಮಾಡಿದ್ದರು. ಎಲ್ಲ ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ಸಾಕಷ್ಟು ಪುರಾವೆಗಳಿವೆ ಎಂದು ವಾದಿಸಿದ್ದರು.



