ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆಯಾಗಿದೆ.
ರಾಜಸ್ತಾನದ ಜೈಪುರದಲ್ಲಿ ಪ್ರತಿಭಟನಾ ರ್ಯಾಲಿ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯತ್ತ ತೆರಳುತ್ತಿದ್ದಾಗ ಗುಂಪಿನಲ್ಲಿದ್ದ ಕೆಲವರು ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಶಹೀದ್ ಸ್ಮಾರಕ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದಿಪ್ಕೆ ಕರೆ ನೀಡಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಅವರು ತೆರಳುತ್ತಿದ್ದ ವೇಳೆ ಪರಿಸ್ಥಿತಿ ಹಠಾತ್ ಉದ್ವಿಗ್ನಗೊಂಡಿತು.
ದಿಪ್ಕೆ ಅವರನ್ನು ಅವರ ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು ಸಾಗಿಸುತ್ತಿದ್ದ ವೇಳೆ ಕೆಲವರು ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಅನ್ನು ಎಳೆದರು. ಈ ವೇಳೆ ಅಭಿಜಿತ್ ಕೆಳಕ್ಕೆ ಬಗ್ಗುತ್ತಲೇ ಕೆಲವರು ಅಭಿಜಿತ್ ರನ್ನು ಹಿಡಿದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದರು ಮತ್ತು ಕೆಳಗೆ ಎಳೆಯಲು ಯತ್ನಿಸಿದರು. ಈ ಅನಿರೀಕ್ಷಿತ ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಅಭಿಜಿತ್ ದಿಪ್ಕೆ ಅವರನ್ನು ಸುತ್ತುವರಿದು ಕೆಲವರು ತಳ್ಳಾಟ-ನೂಕಾಟ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮಧ್ಯಪ್ರವೇಶಿಸಿದರು ಎಂದು ವರದಿಯಾಗಿದೆ.
ಹಲ್ಲೆ ನಡೆಸಿದವರ ಗುರುತು ಅಥವಾ ಹಲ್ಲೆಯ ಹಿಂದಿನ ಉದ್ದೇಶದ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.



