ಟೆಹರಾನ್/ ವಾಷಿಂಗ್ಟನ್: ಮಧ್ಯಪ್ರಾಚ್ಯದ ಯುದ್ಧಕ್ಕೆ 10ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಇಸ್ರೇಲ್ ಮತ್ತು ಅಮೆರಿಕ ನಡುವೆ ಅಸಮಧಾನ ಹೊಗೆಯಾಡಲು ಆರಂಭಿಸಿದರೆ, ನಾಗರಿಕರ ಮೇಲಿನ ದಾಳಿ ಖಂಡಿಸಿ ಮಾನವ ಹಕ್ಕುಗಳ ಸಂಸ್ಥೆಗಳು ಮಧ್ಯಪ್ರವೇಶಿಸುವಂತೆ ಇರಾನ್ ಮನವಿ ಮಾಡಿದೆ.
ಜಗತ್ತಿನ ಅತೀ ದೊಡ್ಡ ಹಾಗೂ ಹೆಚ್ಚು ತೈಲ ಘಟಕಗಳನ್ನು ಹೊಂದಿರುವ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿರುವ ಇರಾನ್ ನ 30 ತೈಲ ಘಟಕಗಳನ್ನು ಕೇಂದ್ರೀಕರಿಸಿ ಇಸ್ರೇಲ್ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿ ಅಪಾರ ನಷ್ಟವುಂಟು ಮಾಡಿತ್ತು.
ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡಿರುವುದನ್ನು ಅಮೆರಿಕ ಖಂಡಿಸಿದ್ದು, ಇದು ಸರಿಯಲ್ಲ ಎಂದು ಹೇಳಿದೆ. ಮತ್ತೊಂದೆಡೆ ಇಸ್ರೇಲ್ ತೈಲ ಘಟಕಗಳನ್ನು ಗುರಿಯಾಗಿಸಿ ದಾಳಿ ಮಾಡುವ ಮುನ್ನ ಅಮೆರಿಕಕ್ಕೆ ಮಾಹಿತಿ ನೀಡದೇ ಇರುವುದು ಕೂಡ ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿದೆ.
ಫೆಬ್ರವರಿ 28ರಿಂದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿತ್ತು. ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಇಸ್ರೇಲ್ ನ ಈ ದಾಳಿ ಯೋಜನೆ ಇಷ್ಟವಾಗಲಿಲ್ಲ. ತೈಲ ಘಟಕಗಳನ್ನು ಕೇಂದ್ರೀಕರಿಸಿ ದಾಳಿ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಂದೆಡೆ ಇರಾನ್ ಇತ್ತೀಚೆಗೆ ಮೃತಪಟ್ಟ 165 ಶಾಲಾ ವಿದ್ಯಾರ್ಥಿನಿಯರು ಹಾಗೂ ನಾಗರಿಕರ ಮೇಲಿನ ದಾಳಿ ಫೋಟೊಗಳನ್ನು ಬಿಡುಗಡೆ ಮಾಡಿ ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಇದನ್ನು ನೋಡಿಯೂ ನಿಮಗೆ ಏನು ಅನ್ನಿಸುವುದಿಲ್ಲವೇ? ಇವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಎಂದು ಹೇಳಿದೆ.
ಅಲ್ಲದೇ ಅಮೆರಿಕ ಮತ್ತು ಇಸ್ರೇಲ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಯುದ್ಧ ನೀತಿಯನ್ನು ಉಲ್ಲಂಘಿಸುತ್ತಿದೆ. ಈ ಬಗ್ಗೆ ಸಂಘಟನೆಗಳು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದೆ.
ಭಾರತದಲ್ಲಿ ಇರಾನ್ 3 ಯುದ್ಧ ನೌಕೆ
ಇರಾನ್ ಗೆ ಸೇರಿದ ಮೂರು ಯುದ್ಧ ನೌಕೆಗಳು ಭಾರತದ ಬಂದರುಗಳನ್ನು ನಿಲ್ಲಿಸಲಾಗಿದೆ. ಭಾರತದಲ್ಲಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇರಾನ್ ಯುದ್ಧ ನೌಕೆ ಮರಳುವಾಗ ಅಮೆರಿಕ ಶ್ರೀಲಂಕಾದ ಹಿಂದೂ ಮಹಾಸಾಗರದಲ್ಲಿ ಹೊಡೆದುರುಳಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ಉಳಿದ ಮೂರು ನೌಕೆಗಳಿಗೆ ಭಾರತದಲ್ಲಿ ರಕ್ಷಣೆ ನೀಡಿದೆ.
2000 ಲಕ್ಷ ಟನ್ ತೈಲ ತಡೆ
ಹುರ್ಮಾಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳನ್ನು ತಡೆದು ನಿಲ್ಲಿಸಿದ್ದರಿಂದ 2000 ಲಕ್ಷ ಟನ್ ತೈಲ ನಿಂತಿವೆ. ಇದರಿಂದ ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳು ಅಡುಗೆ ಅನಿಲ ಸೇರಿದಂತೆ ಪೆಟ್ರೋಲ್, ಡೀಸೆಲ್ ಕೊರತೆ ಎದುರಿಸುವ ಭೀತಿಗೆ ಸಿಲುಕಿವೆ.



