Sunday, June 28, 2026
Google search engine
Homeರಾಜ್ಯಬಂಡೀಪುರ, ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ: ಸಚಿವ ಈಶ್ವರ ಖಂಡ್ರೆ ಘೋಷಣೆ

ಬಂಡೀಪುರ, ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ: ಸಚಿವ ಈಶ್ವರ ಖಂಡ್ರೆ ಘೋಷಣೆ

ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನಾರಂಭಿಸಲು ನಿರ್ಧರಿಸಿರುವುದಾಗಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕಳೆದ ನವೆಂಬರ್ 7 ರಿಂದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಾಗಿದೆ ಎಂದರು.

ಹೆಗ್ಗಡ ದೇವನಕೋಟೆಯಲ್ಲಿ ರೈತರೂ ಸೇರಿದಂತೆ ಸಾವಿರಾರು ಸ್ಥಳೀಯರು, ರೆಸಾರ್ಟ್ ಸಿಬ್ಬಂದಿ ಪ್ರತಿಭಟನೆ ನಡೆಸಿ ಸಫಾರಿ ನಿಲ್ಲಿಸಿರುವುದರಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಸಫಾರಿ ಪುನಾರಂಭಿಸಬೇಕು ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಮಾಧ್ಯಮಗಳಲ್ಲಿ ಸಫಾರಿ ಪುನಾರಂಭಿಸಬೇಕು ಎಂದು ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಜೀವವೂ ಉಳಿಯಬೇಕು, ಜೀವನೋಪಾಯವೂ ಇರಬೇಕು ಎಂಬ ಕಾರಣಕ್ಕಾಗಿ ಸಫಾರಿಯನ್ನು ನಿಯಂತ್ರಿತವಾಗಿ ಮತ್ತು ಹಂತಹಂತವಾಗಿ ಪುನಾರಂಭ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ನಂತರ ಅವರು, ಬಂಡೀಪುರದಲ್ಲಿ ನವೆಂಬರ್ ವರೆಗೆ ನಡೆಯುತ್ತಿದ್ದ ಟ್ರಿಪ್, ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಸಫಾರಿ ಪುನಾರಂಭಕ್ಕೆ ಸಮ್ಮತಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದೂ ವಿವರಿಸಿದರು.

ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ನಿರ್ಧಾರ:

ಕಳೆದ ಜನವರಿ 2ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿಯ ಆಧಾರದಲ್ಲಿ ಹಂತಹಂತವಾಗಿ ಸಫಾರಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ (WII)‌ ವಿಜ್ಞಾನಿ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ, ಭೋಪಾಲ್ (IIFM)‌ ರ ಪ್ರಾಧ್ಯಾಪಕರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ಮಧ್ಯಂತರ ವರದಿಯ ಬಗ್ಗೆ ಇಂದು ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments