ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಂಡನನ್ನೇ ಕೊಲೆ ಮಾಡಿದ್ದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಭದ್ರಾವತಿ ನ್ಯಾಯಾಲಯಗಲ್ಲು ಶಿಕ್ಷೆ ವಿಧಿಸಿದೆ.
ಭದ್ರಾವತಿಯ ಸುರಗಿನ ತೋಪಿನ ನಿವಾಸಿ ಪ್ರಕಾಶ್ ಬಾಬು ಪ್ಲೋರಾ ನ್ಯಾನ್ಸಿ ಹಾಗೂ ರಾಜಶೇಖರಯ್ಯ ಅವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 14 ಲಕ್ಷ ರೂ. ದಂಡ ವಿಧಿಸಿದೆ.
ಪ್ಲೊರಾ ನ್ಯಾನ್ಸಿ ಹಾಗೂ ರಾಜಶೇಖರಯ್ಯ ಅನೈತಿಕ ಸಂಬಂಧ ಹೊಂದಿದ್ದರು. ಈ ಕುರಿತು ಪ್ರಕಾಶ್ ಬಾಬು ನ್ಯಾನ್ಸಿಗೆ ಸಾಕಷ್ಟು ಬುದ್ದಿವಾದ ಹೇಳಿದ್ದರೂ ಸಹ ಆಕೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದರು. ತನ್ನ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದ ಎಂದು ನ್ಯಾನ್ಸಿಯು ಪ್ರಕಾಶ್ ಬಾಬುವಿಗೆ ಮತ್ತು ಬರುವ ಔಷಧ ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ 50/2020 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ತನಿಖೆ ಪ್ರಾರಂಭಿಸಿದ್ದ ಅಂದಿನ ಸಿಪಿಐ ಆದ ಮಂಜುನಾಥ್ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿಗಳಿಬ್ಬರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿಗಳಾದ ಪ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಅವರಿಗೆ ಗಲ್ಲು ಶಿಕ್ಷೆ ಹಾಗೂ 14 ಲಕ್ಷ ರೂ ದಂಡ ವಿಧಿಸಿದ್ದಾರೆ.
ಪಿರ್ಯಾದುದಾರರಿಗೆ 5 ಲಕ್ಷ ರೂ ನೀಡಲು ಸೂಚನೆ ನೀಡಿದ್ದಾರೆ. ಸರ್ಕಾರಿ ವಕೀಲರಾದ ಶ್ರೀಮತಿ ರತ್ನಮ್ಮ ಅವರು ವಾದ ಮಂಡಿಸಿದ್ದರು. ತಾಲೂಕು ಕೋರ್ಟ್ನಲ್ಲಿ ಗಲ್ಲು ಶಿಕ್ಷೆ ನೀಡಿದ್ದು ಅಪರೂಪದಲ್ಲಿ ಅಪರೂಪವಾಗಿದೆ.



