ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಸ್ಸೆನ್ನೆಲ್ ಮಾಡಿದ ಎಡವಟ್ಟಿನಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬರೊಬ್ಬರಿ 1,757 ಕೋಟಿ ರೂ. ನಷ್ಟವಾಗಿದೆ ಎಂದು ಭಾರತದ ಸಿಎಜಿ ವರದಿ ಹೇಳಿದೆ.
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಸೆನ್ನೆಲ್ ಸ್ಥಿರ ಮೂಲಸೌಕರ್ಯಗಳ ಹಂಚಿಕೆಗಾಗಿ ತಮ್ಮ ನಡುವಿನ ಒಪ್ಪಂದದ ಪ್ರಕಾರ ಮೇ 2014ರಿಂದ 10 ವರ್ಷಗಳ ಕಾಲ ರಿಲಯನ್ಸ್ ಜಿಯೋ ಸಂಸ್ಥೆಗೆ ಶುಲ್ಕವನ್ನು ವಿಧಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಸರ್ಕಾರವು 1757.56 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ವರದಿ ಹೇಳಿದೆ.
ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ (ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ತಿಳಿಸಿದ್ದಾರೆ.
ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿ.(ಆರ್‌ಜೆಐಎಲ್) ಜೊತೆ ಮಾಸ್ಟರ್ ಸರ್ವಿಸ್ ಅಗ್ರಿಮೆಂಟ್(ಎಂಎಸ್‌ಎ) ಜಾರಿಗೊಳಿಸುವಲ್ಲಿ ಬಿಎಸ್‌ಎನ್‌ಎಲ್ ವಿಫಲಗೊಂಡಿದೆ.
ಹೀಗಾಗಿ ಮೇ 2014 ಮತ್ತು ಮೇ 2024ರ ನಡುವೆ ತನ್ನ ಸ್ಥಿರ ಮೂಲಸೌಕರ್ಯದಲ್ಲಿ ಬಳಸಿಕೊಂಡ ಹೆಚ್ಚುವರಿ ತಂತ್ರಜ್ಞಾನಕ್ಕೆ ಶುಲ್ಕವನ್ನು ವಿಧಿಸಿಲ್ಲ. ಇದು ಸರ್ಕಾರದ ಬೊಕ್ಕಸಕ್ಕೆ 1757.56 ಕೋಟಿ ರೂ. ಮತ್ತು ಅದರ ಮೇಲಿನ ದಂಡ ಬಡ್ಡಿಯ ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಸ್ಥಿರ ಮೂಲಸೌಕರ್ಯ ಹಂಚಿಕೆಯ ಮೇಲೆ ಬಿಎಸ್‌ಎನ್‌ಎಲ್ ಶಾರ್ಟ್ ಬಿಲ್ಲಿಂಗ್ ಮಾಡಿದೆ ಎನ್ನುವುದನ್ನೂ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಿಲಯನ್ಸ್ ಜಿಯೊ ಜೊತೆಗಿನ ಒಪ್ಪಂದದಲ್ಲಿ ನಿಗದಿ ಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಬಿಎಸ್‌ಎನ್‌ಎಲ್ ಪಾಲಿಸಿಲ್ಲ ಮತ್ತು ಹೆಚ್ಚಳ ನಿಬಂಧನೆಯನ್ನು ಅನ್ವಯಿಸಿಲ್ಲ. ಹೀಗಾಗಿ ಮೂಲಸೌಕರ್ಯ ಹಂಚಿಕೆ ಶುಲ್ಕಗಳಿಗೆ ಸಂಬಂಧಿಸಿದಂತೆ 29 ಕೋಟಿ ರೂ.(ಜಿಎಸ್‌ಟಿ) ಆದಾಯ ನಷ್ಟವಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
4ಜಿ ವಿಳಂಬದಿಂದ ನಷ್ಟ
ಬಿಎಸ್‌ಎನ್‌ಎಲ್ ಒಂದು ಲಕ್ಷ 4ಜಿ ಸೈಟ್‌ಗಳಿಗೆ ಖರೀದಿ ಆದೇಶಗಳನ್ನು ನೀಡಿದೆ, ಅದರಲ್ಲಿ 83, 993 ಸೈಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಮಾರ್ಚ್ 8 ರ ವೇಳೆಗೆ 74,521 ಸೈಟ್‌ಗಳು ಪ್ರಸಾರ ಆರಂಭಿಸಿವೆ.ಅಂತೆಯೇ ೪ಜಿ ಸೇವೆಗಳ ಬಿಡುಗಡೆಯಲ್ಲಿ ವಿಳಂಬ ಮತ್ತು ಮೊಬೈಲ್ ವಿಭಾಗದಲ್ಲಿನ ತೀವ್ರ ಸ್ಪರ್ಧೆಯಿಂದಾಗಿ ಬಿಎಸ್‌ಎನ್‌ಎಲ್ ಆದಾಯದ ಮೇಲೆ ಪರಿಣಾಮ ಬೀರಿದೆ” ಎಂದು ಸಚಿವರು ಮಾಹಿತಿ ನೀಡಿದರು.



