ಬೆಂಗಳೂರು: ಬುರ್ಕಾ ಧರಿಸಿ ಪ್ರಯಾಣಿಕರ ಸೋಗಿನಲ್ಲಿ,ಒತ್ತಡದಿಂದ ಬಸ್ ಹತ್ತುವ ಸಮಯದಲ್ಲಿ ಮಹಿಳೆಯರ ಬ್ಯಾಗ್‍ನಲ್ಲಿರುವ ಚಿನ್ನಾಭರಣಗಳನ್ನು ದೋಚುತ್ತಿದ್ದ ಮೂವರು ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ್ನು ಪೀಣ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಸೇಡಂ ರಸ್ತೆಯ ತಾಂಡಾದ ಪದ್ಮ(42) ಅನು (33)ಹಾಗೂ ಯಶವಂತಪುರದ ಪ್ರಾಥನ (23)ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 16 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಳೆದ 24 ರಂದು ಮಾದವಾರದ ಶೋಭಾ ಅವರು ಹಾಸನದಲ್ಲಿ ನಡೆಯುತ್ತಿದ್ದ ಅಣ್ಣನ ಮಗನ ಮದುವೆಗೆ ಹೋಗಲು ಸಂಜೆ 8ನೇ ಮೈಲಿ ಬಸ್ ನಿಲ್ದಾಣದಿಂದ ಬಸ್ ಹತ್ತುವಾಗ ತಳ್ಳಾಡಿಕೊಂಡು ಬಸ್ ಹತ್ತಿ ಬಸ್ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ತಳ್ಳಾಡಿಕೊಂಡು ಬಸ್ ಹತ್ತಿದ್ದ ಮೂವರು ಮಹಿಳೆಯರು ಸೀಟ್ ಇಲ್ಲವೆಂದು ಗೊಣಗುತ್ತಾ, ಬೇರೆ ಬಸ್‍ಗೆ ಹೋಗುತ್ತೇವೆಂದು ಹೇಳಿ ಬಸ್‍ನಿಂದ ಇಳಿದು ಹೊರಟು ಹೋಗಿರುತ್ತಾರೆ.
ಬಸ್ ನೆಲಮಂಗಲದ ಅರಿಸಿನಕುಂಟೆ ಬಳಿ ಹೋಗುತ್ತಿದ್ದಾಗ ಶೋಭಾ ಅವರು ವ್ಯಾನಿಟಿ ಬ್ಯಾಗ್‍ನ್ನು ಪರಿಶೀಲಿಸಿದಾಗ ಬ್ಯಾಗ್‍ನಲ್ಲಿಟ್ಟಿದ್ದ 50 ಗ್ರಾಂ ಚಿನ್ನಾಭರಣಗಳು ಕಾಣಿಯಾಗಿದ್ದು, ಮೂವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿ ಪೀಣ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.
ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡ ಇನ್ಸ್‌ಪೆಕ್ಟರ್ ಅಶೋಕ್.ಎಂ.ಎಸ್ ಮತ್ತವರ ಸಿಬ್ಬಂದಿ ಖಚಿತ ಮಾಹಿತಿಯನ್ನು ಕಲೆಹಾಕಿ, ಕಳೆದ ಜು.16 ರಂದು ತುಮಕೂರು ರಸ್ತೆ 8ನೇ ಮೈಲಿ ಬಸ್ ನಿಲ್ದಾಣದ ಬಳಿ ಮೂವರು ಬುರ್ಖಾದಾರಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಚಾರಣೆಯಲ್ಲಿ ಆರೋಪಿಗಳು ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಇದೇ ರೀತಿಯಲ್ಲಿ 3 ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾರೆ.



