Friday, July 3, 2026
Google search engine
Homeರಾಜ್ಯ90 ದಿನದಲ್ಲಿ ಜಾತಿ ಗಣತಿ ಮರು ಸಮೀಕ್ಷೆ: ಸಿಎಂ ಸಿದ್ದರಾಮಯ್ಯ ಘೋಷಣೆ

90 ದಿನದಲ್ಲಿ ಜಾತಿ ಗಣತಿ ಮರು ಸಮೀಕ್ಷೆ: ಸಿಎಂ ಸಿದ್ದರಾಮಯ್ಯ ಘೋಷಣೆ

ನವದೆಹಲಿ: ವಿವಾದಾತ್ಮಕ ಜಾತಿ ಗಣತಿಯ ಮರು ಸಮೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಸೇರಿದಂತೆ ಹೈಕಮಾಂಡ್ ಮುಖಂಡರ ಜೊತೆ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.

ಮುಖ್ಯವಾಗಿ ಹೈಕಮಾಂಡ್ ಜೊತೆ ಜಾತಿ ಜನಗಣತಿ ಬಗ್ಗೆ ಚರ್ಚೆ ನಡೆದಿದೆ. ಜಾತಿ ಜನಗಣತಿ ವರದಿ 10 ವರ್ಷದ ಹಳೆಯದಾಗಿರುವ ಕಾರಣ ನಿರ್ಧಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇನ್ನು ಜಾತಿ ಜನಗಣತಿ ಮರು ಸರ್ವೇ ಮಾಡುವ ಬಗ್ಗೆಯೂ ಸಹ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ಬೆಳವಣಿಗೆ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮಾಡಿದರು. ಮುಖ್ಯವಾಗಿ ಜಾತಿಗಣತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಕೆಲವರು ವರದಿಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚೆ ಆಯಿತು. ಜಾತಿಗಣತಿ ಸಮೀಕ್ಷೆ ಮಾಡಿ 9 ರಿಂದ 10 ವರ್ಷ ಆಗಿದೆ. ಹಾಗಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಲು ಹೇಳಿದ್ದಾರೆ. ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಗೆ ನಾವು ಒಪ್ಪಿಗೆ ನೀಡಿದ್ದೇವೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಸ್ಪಷ್ಟಪಡಿಸಿದರು.

ಕಾಲ್ತುಳಿತ ದುರಂತ ಪ್ರಕರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದ್ದು, ಕೈಗೊಂಡಿರುವ ಕ್ರಮದ ಬಗ್ಗೆ ವಿವರಣೆ ನೀಡಿದ್ದೇವೆ. ಸಿಐಡಿ, ನ್ಯಾ.ಕುನ್ಹಾ ನೇತೃತ್ವದ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಇಂಟಲಿಜೆನ್ಸ್‌ ಮುಖ್ಯಸ್ಥರ ವರ್ಗಾವಣೆ ಈ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ ಎಂದರು.

11 ಜನರು ಸಾಯಬಾರದಿತ್ತು. ಆ ಘಟನೆಯಿಂದ ನೋವಾಗಿದೆ. ಸಮರ್ಥನೆಗೆ ಕುಂಭಮೇಳದ ಘಟನೆಯನ್ನು ತೆಗೆದುಕೊಳ್ಳುವುದಿಲ್ಲ. ರಾಜ್ಯದಲ್ಲಿ ನಡೆದ ಘಟನೆಯಿಂದ ನೋವಾಗಿದೆ. ತನಿಖೆಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಮಾತನಾಡಿ, ಇಂದಿನ ಸಭೆಯಲ್ಲಿ ಜಾತಿ ಜನಗಣತಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಜೂನ್ 12ನೇ ತಾರೀಖಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ನಿರ್ಧಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ನಡೆಸಲಾಗುವುದು ಎಂದಿರುವ ಕಾಂಗ್ರೆಸ್ ನಾಯಕರು 60, 80, 90 ದಿನಗಳ ಕಾಲ‌ ಮಿತಿಯಲ್ಲಿ ವರದಿ ತರಲು ತೀರ್ಮಾನಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿ ಗಣತಿ ವರದಿಯು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಕಾಂಗ್ರೆಸ್​ ಶಾಸಕರು, ಹಿರಿಯ ನಾಯಕರು ಈ ಜಾರಿ ಗಣತಿ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ಮಹತ್ವದ ಚರ್ಚೆ ಮಾಡಿದ್ದು, ಮತ್ತೆ ಮರು ಸರ್ವೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments