ಟಿವಿಕೆ ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಗೆ ಕರೂರು ಕಾಲ್ತುಳಿತ ಪ್ರಕರಣದಲ್ಲಿ ಸಿಬಿಐ ಸೋಮವಾರ 6 ಗಂಟೆಗಳ ವಿಚಾರಣೆ ನಡೆಸಿತು.
ಸುದೀರ್ಘ ವಿಚಾರಣೆ ವೇಳೆ ವಿಜಯ್ ದುರಂತದಲ್ಲಿ ತಮ್ಮ ಪಾತ್ರವೇನೂ ಇಲ್ಲ. ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಸ್ಥಳದಿಂದ ನಿರ್ಗಮಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ದುರಂತ ನಡೆದ ನಂತರ ಟಿವಿಕೆ ಪಕ್ಷ ಇದೇ ಹೇಳಿಕೆಯನ್ನು ನೀಡಿತ್ತು. ಇದೀಗ ಹೇಳಿಕೆಗೂ ವಿಜಯ್ ವಿಚಾರಣೆ ವೇಳೆ ನೀಡಿದ ಹೇಳಿಕೆಗೂ ತಾಳೆ ನೋಡಿ ಸಿಬಿಐ ಪರಾಮರ್ಶೆ ನಡೆಸಲಿದೆ ಎಂದು ಹೇಳಲಾಗಿದೆ.
ರ್ಯಾಲಿ ವೇಳೆ ವಿಜಯ್ ತಡವಾಗಿ ಸ್ಥಳಕ್ಕೆ ಬಂದಿದ್ದರಿಂದ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರಿಂದ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು.
ಸೆಪ್ಟೆಂಬರ್ 27, 2025ರಂದು ನಡೆದ ಕರೂರುನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 41 ಮಂದಿ ಅಸುನೀಗಿದ್ದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಕಳೆದ ತಿಂಗಳು ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ಕಚೇರಿಗೆ ವಿಶೇಷ ವಿಮಾನದಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಆಗಮಿಸಿದರು.
ಮಂಗಳವಾರ ವಿಚಾರಣೆಗೆ ಹಾಜರಾಗಲು ಯಾವುದೇ ನೋಟಿಸ್ ನೀಡದೇ ಇದ್ದರೂ ಶೀಘ್ರದಲ್ಲೇ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.



