ನವದೆಹಲಿ: ನಕಲಿ ಔಷಧಿಗಳ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ವೈದ್ಯರು, ಫಾರ್ಮಾಸಿಸ್ಟ್‌ಗಳು, ಡಿಸ್ಟ್ರಿಬ್ಯೂಟರ್‌ಗಳು, ಆಸ್ಪತ್ರೆಗಳು ಹಾಗೂ ಹೆಲ್ತ್‌ಕೇರ್ ವೃತ್ತಿಪರರು ಸೇರಿದಂತೆ ಔಷಧ ವಿತರಣಾ ವ್ಯವಸ್ಥೆಯ ಎಲ್ಲ ಹಂತಗಳಿಗೂ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಕಾನೂನು ಪಾಲನೆಗೆ ಸೂಚನೆ:
ನಕಲಿ ಔಷಧಿ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಔಷಧಿಗಳನ್ನು ಔಷಧ ಕಾಯ್ದೆ, 1945 ಪ್ರಕಾರ ಮಾತ್ರ ಖರೀದಿ ಮತ್ತು ಮಾರಾಟ ಮಾಡಬೇಕು. ಫಾರ್ಮಾಸಿಸ್ಟ್‌ಗಳು ಜನರಿಗೆ ಸೂಕ್ತ ಚಿತ್ತಿಕೆಗೆ ಆಂಟಿಬಯೋಟಿಕ್ ಅಥವಾ ನೋವು ಮಾತ್ರೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಬೇಕು. ಔಷಧಿ ಲೇಬಲ್ ಮೇಲಿನ ಎಚ್ಚರಿಕೆ ಹಾಗೂ ಮಾರಾಟದ ಪರವಾನಗಿಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಸಂಸ್ಥೆಗಳಿಗೆ ಮಾರ್ಗಸೂಚಿ:
ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವಂತಿಲ್ಲ. ವೈದ್ಯರು ನೀಡುವ ವೈದ್ಯಕೀಯ ಸಲಹೆಯಂತೆ ಔಷಧಿಗಳನ್ನು ಮಾತ್ರ ಬಳಕೆ ಮಾಡಬೇಕು. ಔಷಧಿ ಪರಿಶೀಲನೆ ಮತ್ತು ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಬೇಕು.
ವೈದ್ಯರಿಗೆ ಮಾರ್ಗಸೂಚಿ:
ರೋಗಿಯ ವಯಸ್ಸು, ಚಿಕಿತ್ಸೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಔಷಧಿ ಮಾತ್ರೆ ನೀಡಬೇಕು. ಅವಶ್ಯಕತೆ ಇದ್ದರೆ ಮಾತ್ರ ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಸಾಧ್ಯವಾದಷ್ಟು ಕಡಿಮೆ ಡೋಸ್‌ನಲ್ಲಿ, ಕಡಿಮೆ ದಿನಗಳವರೆಗೆ ಔಷಧಿ ಬಳಕೆಗೆ ಸಲಹೆ ನೀಡಬೇಕು.
ಕಿಡ್ನಿ ಸಮಸ್ಯೆ, ನಿಜಲೀಕರಣ ಸೇರಿದಂತೆ ಆರೋಗ್ಯ ಸಮಸ್ಯೆ ಇರುವವರಿಗೆ ನೋವು ನಿವಾರಕ ಔಷಧಿಗಳನ್ನು ಎಚ್ಚರಿಕೆಯಿಂದ ನೀಡಬೇಕು. ಆಂಟಿಬಯೋಟಿಕ್‌ಗಳನ್ನು ಅನಗತ್ಯವಾಗಿ ಬಳಕೆ ಮಾಡದಂತೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಗಮನಹರಿಸಬೇಕು.
ನಕಲಿ ಔಷಧಿ ಪತ್ತೆ ತಕ್ಷಣ ಕ್ರಮ:
ಯಾವುದೇ ಬ್ಯಾಚ್‌ನ ಔಷಧಿ ಬಗ್ಗೆ ಅನುಮಾನ ಕಂಡುಬಂದರೆ ತಕ್ಷಣ ಅದರ ಬಳಕೆಯನ್ನು ಸ್ಥಗಿತಗೊಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅನುಮಾನಾಸ್ಪದ ಔಷಧಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
ನಕಲಿ ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ತಡೆಯಲು ಔಷಧಿ ನಿಯಂತ್ರಣ ಅಧಿಕಾರಿಗಳು, ಆಸ್ಪತ್ರೆಗಳು, ಫಾರ್ಮಾಸಿಸ್ಟ್‌ಗಳು ಹಾಗೂ ಔಷಧಿ ವಿತರಕರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಕೇಂದ್ರ ಇಲಾಖೆ ಸೂಚಿಸಿದೆ.



