ಬೆಂಗಳೂರು: ನಾನು ಧರ್ಮಸ್ಥಳಕ್ಕೆ ಹೋಗಲೇ ಇಲ್ಲ, ಗಿರೀಶ್ ಮಟ್ಟಣ್ಣನವರ್ ಅವರನ್ನು ಭೇಟಿ ಮಾಡಲೇ ಇಲ್ಲ. ಚಿನ್ನಯ್ಯ ಕರೆ ಮಾಡಿದ್ದು ನಿಜ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಸ್ಕ್ ಮ್ಯಾನ್ ಕುಖ್ಯಾತಿಯ ಚಿನ್ನಯ್ಯ ಕರೆ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಎಸ್ಐಟಿ ಮುಖ್ಯಸ್ಥರಿಗೆ ಕಳುಹಿಸಿ ಮಾಹಿತಿ ನೀಡಿದ್ದೆ ಎಂದು ತಿಳಿಸಿದರು.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿ ನನ್ನ ಹೆಸರು ಉಲ್ಲೇಖದ ಬಗ್ಗೆ ಹಲವು ಮಾಧ್ಯಮಗಳು ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿತು, ಆದರೆ ಇನ್ನೂ ಕೆಲವು ಮಾಧ್ಯಮಗಳು ಅವರೇ ಜಡ್ಜ್ಮೆಂಟ್ ಮಾಡಿ ಬರೆದಿದ್ದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಧರ್ಮಸ್ಥಳ ಪ್ರಕರಣ ಮತ್ತು ಚಿನ್ನಯ್ಯನ ಹೇಳಿಕೆ ಬಂದಿದೆ. ಕೋರ್ಟ್ನಲ್ಲಿ ಚಿನ್ನಯ್ಯನವರು ‘ಪ್ರಕಾಶ್ ರೈ ಅವರು ನನಗೆ ಕರೆ ಮಾಡಿದ್ದರು. ನೀನು ಗಿರೀಶ್ ಮಟ್ಟಣ್ಣ, ಹೇಳಿದ ಹಾಗೆ ಕೇಳಿ ಪೊಲೀಸರ ಹತ್ತಿರ ಉತ್ತರ ಕೊಡು. ನೀನು ನಿಜ ಹೇಳಿದ ಮೇಲೆ ನಾನು ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ’ ಎಂಬ ಹೇಳಿಕೆ ಕೊಟ್ಟಿರುತ್ತಾನೆ. ಇದಲ್ಲದೇ ಮಾಧ್ಯಮಗಳ ಮೂಲಕ ನನಗೆ ಗೊತ್ತಿರುವ ಹಾಗೇ ಕೇರಳದಿಂದ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡಲು 200 ರೂ. ಕೋಟಿಯನ್ನು ಯಾರೋ ಹೂಡಿಕೆ ಮಾಡಿದ್ದಾರೆ. ಅದರಲ್ಲಿ 50 ಲಕ್ಷ ರೂ.ವನ್ನು ಚಿನ್ನಯ್ಯನಿಗೆ ಕೊಡಬೇಕೆಂತ ಮಾತನಾಡಿದ್ದರು, ಅದರಲ್ಲಿ ಪ್ರಕಾಶ್ ರೈ ಹೆಸರು ಹೇಳಲಾಗಿದೆ, ಹಾಗೇ 200 ಕೋಟಿ ಹೇಳಿಕೆ ಬಂದಿದೆ. ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನಲ್ಲ, ಮಟ್ಟಣ್ಣನವರನನ್ನು ಭೇಟಿ ಮಾಡಿದವನಲ್ಲ. ಆದರೆ ಅಲ್ಲಿ ಸರಣಿ ಸಾವಾಗಿದೆ ಎಂಬ ಸುದ್ದಿಗೆ ಆತಂಕ ಪಟ್ಟದ್ದಂತು ನಿಜ ಎಂದು ವಿವರಿಸಿದರು.
ಮಂಡ್ಯದಿಂದ ಒಬ್ಬ ಬಂದಿದ್ದಾನಂತೆ, ಅವನು ಅಲ್ಲಿ ಕೆಲಸ ಮಾಡುತ್ತಿದ್ದನಂತೆ, ಅವನು ಆ ಹೆಣಗಳನ್ನು ಹೂತು ಹಾಕಿದ್ದಾನಂತೆ ಎಂದ ತಕ್ಷಣ ಎಲ್ಲಾ ಭಕ್ತರು ತೊಂದರೆಗೊಳಗಾಗಿದ್ದರು, ನನ್ನಲ್ಲೂ ಕೂಡ ಆತಂಕ ಉಂಟಾಗಿತ್ತು. ಏಕೆಂದರೆ ನಾನು ಸಾಮಾಜಿಕ ಕಾರ್ಯಕರ್ತ” ಎಂದು ಪ್ರಕಾಶ್ ರಾಜ್ ಹೇಳಿದರು.
ಇದು ನಡೆದಿರುವುದು ನಿಜ. ಇದರ ಬಗ್ಗೆ ಒಂದು ಎಸ್ಐಟಿ ತಂಡ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ, ಉಳಿದವರಿಗೆ ಒತ್ತಡ ಹಾಕಿದ್ದು ನಿಜ. ಅದಾದ ಮೇಲೆ ಸರಿಯಾದ ಅಧಿಕಾರಿಯನ್ನು ಆಯ್ಕೆ ಮಾಡಿ ಎಂದೂ ಹೇಳಿದ್ದೆವು. ಕೊನೆಗೆ ಈ ಪ್ರಕರಣಕ್ಕೆ ಪ್ರಣವ್ ಮೊಹಂತಿ ಅಂತಹ ದಕ್ಷ ಅಧಿಕಾರಿಯನ್ನು ಆಯ್ಕೆ ಮಾಡಿದಾಗ ನಾನೇ ಒಳ್ಳೇ ವಿಷಯ ಎಂದು ಟ್ವೀಟ್ ಮಾಡಿದ್ದೆ. ಮೊಹಂತಿ ಅವರು ಇನ್ನೂ ಚಿನ್ನಯನನ್ನು ಭೇಟಿ ಮಾಡಿಲ್ಲ, ಚಾರ್ಜ್ ತೆಗದುಕೊಂಡಿದ್ದಾರೆ ಎಂಬುದು ತಿಳಿಯಿತು. ಹೀಗಿರಬೇಕಾದರೆ ನನಗೆ ಗಿರೀಶ್ ಮಟ್ಟಣ್ಣ ಅವರಿಂದ ಒಂದು ಕರೆ ಬಂತು. ಕರೆಯಲ್ಲಿ ಮಾಸ್ಕ್ ವ್ಯಕ್ತಿ ಇದ್ದಾನೆ, ಅವನಿಗೆ ನಿಮ್ಮ ಜತೆ ಮಾತನಾಡಬೇಕೆಂತೆ ಎಂದರು.
ಫೋನ್ ಕೊಡಿ ಎಂದೆ. ಆದರೆ ಚಿನ್ನಯ್ಯ ತಮಿಳಿನಲ್ಲಿ ಮಾತನಾಡಿದ. ಕರೆಯಲ್ಲಿ ‘ಏನಪ್ಪಾ? ಅಂದೆ. ನನಗೆ ನಿಮ್ಮನ್ನು ನೋಡಬೇಕು ಅಂದ. ಅದಕ್ಕೆ ನಾನೂ ನನ್ನ ಯಾಕಪ್ಪ ನೋಡಬೇಕು. ಎಸ್ಐಟಿ ರಚನೆ ಮಾಡಿದ್ದಾರೆ, ಹೋಗು ಎಂದೆ. ಧೈರ್ಯ ಇಲ್ಲ ನನಗೆ ಎಂದ. ಅದಕ್ಕೆ ನಾನು ನನ್ನನ್ನು ಭೇಟಿ ಮಾಡುವುದೆಲ್ಲ ಬೇಡ. ನಿನಗೆ ಏನಾದರೂ ಹೇಳಬೇಕೆಂದಿದ್ದರೆ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದೆ’ ಎಂದು ರೈ ತಿಳಿಸಿದರು.
ಆತ ರೆಕಾರ್ಡ್ ಕಳುಹಿಸಿದ್ದ, ಅದರಲ್ಲಿ ಏನೇನೋ ಬಡಬಡಾಯಿಸಿದ್ದ. ನಾನು ತಕ್ಷಣ ನನ್ನ ವಕೀಲರಿಗೆ ಕರೆ ಮಾಡಿ, ನೋಡಿ ಇಡೀ ದೇಶದಲ್ಲಿ ಮಾಧ್ಯಮಕ್ಕೆ ಏನೂ ಗೊತ್ತಿಲ್ಲ. ನನಗೆ ನೇರವಾಗಿ ಕರೆ ಬಂದಿದೆ. ನಾನು ಏನು ಮಾಡಬೇಕು ಈಗ ಎಂದು ಕೇಳಿದ್ದೆ. ಬಳಿಕ ಆ ದಿನವೇ ನಾವು ಪ್ರಣವ್ ಮೊಹಂತಿ ಅವರಿಗೆ ಕರೆ ಮಾಡಿ, ವಿಚಾರ ತಿಳಿಸಿ ಅವರನ್ನು ಭೇಟಿ ಮಾಡಿ, ರೆಕಾರ್ಡ್ ನೀಡಿದ್ದೆ. ಅದಕ್ಕೆ ಮೊಹಂತಿ ಅವರು ನಾನು ಅವನನ್ನು (ಚಿನ್ನಯ್ಯ) ಕರೆಸಿ ಮಾತನಾಡುತ್ತೇನೆ. ಸಾಕ್ಷಿಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದರು.
ಸ್ವಲ್ಪ ದಿನದ ಬಳಿಕ ಪ್ರಕರಣದ ಕುರಿತು ನಾನು ಮೊಹಂತಿ ಅವರಿಗೆ ಕೇಳಿದಾಗ, ‘ಪ್ರಕಾಶ್ ಇನ್ನು ಮೇಲೆ ಆ ಕರೆಗಳನ್ನು ತೆಗದುಕೊಳ್ಳಬೇಡಿ. ಅವನನ್ನು ಕರೆಸಿ ಮಾತನಾಡಿದ್ದೆ, ಆತ ಈಗ ರಿವರ್ಸ್ ಆಗುತ್ತಿದ್ದಾನೆ ಎಂದರು.
ನಾನು ಅದಕ್ಕೆ ಓಕೆ ಎಂದೆ. ಇಲ್ಲಿ ಚಿನ್ನಯ್ಯ ಹೇಳಿದ್ದು ಸರಿ, ನನಗೆ ಅವನು ಕರೆ ಮಾಡಿದ್ದು ಸರಿ. ಆದರೆ ಒಬ್ಬ ಪ್ರಜೆ ಆಗಿ ನಾನು ತಕ್ಷಣ ಓ ಇವರೇ ಮಾಡಿದ್ದಾರೆ ಎಂದು ಧರ್ಮಸ್ಥಳದ ಆಂದೋಲನಕ್ಕೆ ಹೋಗಲಿಲ್ಲ, ಯಾರ ಜೊತೆನೂ ಕೂತುಕೊಳ್ಳಲಿಲ್ಲ.ಏಕೆಂದರೆ ಧರ್ಮಸ್ಥಳ ಕೋಟ್ಯಾಂತರ ಭಕ್ತರು ಬರುವ ಸ್ಥಳವದು. ಆ ಪ್ರಕರಣ ಧರ್ಮಸ್ಥಳದಲ್ಲೂ ನಡೆಯಬಾರದು, ಬೇರೆ ಎಲ್ಲೂ ನಡೆಯಬಾರದು.
ನಮಗೆ ಬೇಕಾಗಿರುವುದು ಏನು? ಸೌಜನ್ಯ ಸತ್ತಿದ್ದಾಳೆ, ಇಷ್ಟು ಹೆಣ್ಣು ಮಕ್ಕಳು ಸತ್ತಿದ್ದಾರೆ. ಮಾಡಿದ್ಯಾರು?. ಬೇರೆ ಅವರು ಬೇರೆ ಬೇರೆ ರಾಜಕೀಯ ಉದ್ದೇಶಕ್ಕೆ ಅವರು ಮಾಡಿದ್ದಾರೆ ಅಂದುಕೊಳ್ಳುತ್ತೀವಿ ಅಂತ ಮಾತನಾಡಿಕೊಳ್ಳುತ್ತಾರೆ, ಮಾತನಾಡಿಕೊಳ್ಳಲಿ. ಆದರೆ ನಾನು ಯಾವ ಹೋರಾಟಕ್ಕೂ ಹೋಗಿಲ್ಲ” ಎಂದು ಮತ್ತೊಮ್ಮೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದರು.



