ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬಯಲಾಗಿರುವ ಲಂಚ ಪ್ರಕರಣದ ತನಿಖೆಗೆ ಆಗ್ರಹಿಸಿದ ದೂರುದಾರ ಲಕ್ಷ್ಮೀನಾರಾಯಣ್, ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ್ದಾರೆ.
ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು, ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯ್ಕ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹಿತ ದಾಖಲೆಗಳನ್ನು ದೂರುದಾರ ಲಕ್ಷ್ಮೀನಾರಾಯಣ್ ಅವರು ಸೋಮವಾರ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಲಕ್ಷ್ಮೀನಾರಾಯಣ್, “ಟ್ರ್ಯಾಪ್ ಆದಾಗ ಮೂವರ ಬಂಧನವಾಗಿದೆ. ಮಂತ್ರಿಯವರಿಗೆ ಎಷ್ಟು ಹಣ ಕೊಡಬೇಕಿದೆ ಎಂದು ಅಬಕಾರಿ ಡಿಸಿಯವರು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಆದ್ದರಿಂದ ಮಂತ್ರಿಯವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದರು.
ನಾನು ಸರ್ಕಾರಕ್ಕೆ ಪಾವತಿಸಬೇಕಿರುವ ಎಲ್ಲಾ ಶುಲ್ಕವನ್ನು ಪಾವತಿಸಿದ್ದರೂ ಸಹ ಲಂಚಕ್ಕೆ ಬೇಡಿಕೆಯಿಟ್ಟು, ಪರವಾನಗಿಯನ್ನು ಕೊಟ್ಟಿರಲಿಲ್ಲ. ಟ್ರ್ಯಾಪ್ ಆಗುವ ಐದು ನಿಮಿಷಗಳಿಗೂ ಮುಂಚೆ ಡಿಸಿ ಮಾತಾಡಿರುವ ಆಡಿಯೋ ನನ್ನ ಬಳಿ ಇದೆ. ಆ ಆಡಿಯೋ ಸೇರಿದಂತೆ ಸೂಕ್ತ ದಾಖಲೆಗಳನ್ನ ಲೋಕಾಯುಕ್ತ ಎಸ್‌ಪಿಯವರಿಗೆ ನೀಡಿದ್ದೇನೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಬೇರೆ ಕಾನೂನು ಮಾರ್ಗಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.



