ಬೆಂಗಳೂರಿನಲ್ಲಿ ಪತ್ತೆಯಾದ ಜೀವಂತ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ 7 ಆರೋಪಿಗಳು ದೋಷಿ ಎಂದು ತೀರ್ಪು ನೀಡಿದ ಎನ್ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ ತಲಾ 48 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರಿನಲ್ಲಿ 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿ ಆರ್.ಟಿ ನಗರದ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು.
ಖಚಿತ ಮಾಹಿತಿ ಮೇರೆಗೆ 2023ರಲ್ಲಿ ಸಿಸಿಬಿ ಪೊಲೀಸರು ಸ್ಫೋಟಕ ವಸ್ತುಗಳು, ವಾಕಿ ಟಾಕಿ, ಮ್ಯಾಪ್ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದರು. ಆರೋಪಿಗಳ ಬಂಧನ ಬಳಿಕ ಪ್ರಕರಣ ಎನ್ಐಎ ಕೈಗೆತ್ತಿಕೊಂಡು ವಿಚಾರಣೆ ಮಾಡಿತ್ತು. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರು ಸ್ಫೋಟದ ರೂವಾರಿ ಟಿ.ನಾಜೀರ್ ಜೊತೆ ಸಂಪರ್ಕ ಹೊಂದಿದ್ದರು.
ಜೈಲಿನಲ್ಲಿ ನಾಜೀರ್ನಿಂದ ಉಗ್ರವಾದಕ್ಕೆ ಪ್ರೇರಣೆಯಾಗಿ ಜೈಲಿನಿಂದ ಹೊರಬಂದ ಬಳಿಕ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದರು. ಬಾಂಬ್ ಬ್ಲಾಸ್ಟ್ ಮಾಡುವ ಮೂಲಕ ಟಿ.ನಾಸೀರ್ ಅನ್ನು ಪೊಲೀಸರಿಂದ ಬಚಾವ್ ಮಾಡಲು ಆರೋಪಿಗಳು ಪ್ರಯತ್ನ ಮಾಡಿದ್ದರು ಎಂದು ತಿಳಿದುಬಂದಿದೆ. ಎನ್ಐಎ ಪರವಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.



