ರೌಡಿ ಶೀಟರ್ ಆಗಿದ್ದ ಪ್ರಿಯಕರನ ಕಿರುಕುಳ ತಾಳಲಾರದೇ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿ ಸೋದರನ ಸಹಾಯದಿಂದ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ಅಮನ್ ಕಾಲೋನಿಯ ಮನೆಯಲ್ಲಿ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ (26) ನನ್ನು ಸಹೋದರ ಅಸ್ಲಮ್ ಭಾಗವಾನ್ ಸಹಾಯ ಪಡೆದು ತಯ್ಯಾಬಾ ಕತ್ತು ಹಿಸುಕಿ ಕೊಲೆ ಮಾಡಿದ್ದು, ಇಬ್ಬರನ್ನು ಗೋಲಗುಂಬಜ್ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಳಿಗ್ಗೆ ನಗರದ ಗೋಲಗುಂಬಜ್ ಪೊಲೀಸ್ ಠಾಣೆಗೆ ಓರ್ವ ಮಹಿಳೆ ಆಗಮಿಸಿ ನಾನು ನನ್ನ ಪ್ರಿಯಕರನನ್ನು ಸೋದರ ಅಸ್ಲಮ್ ಜೊತೆಗೂಡಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ಕ್ಷಣ ಗಾಬರಿಯಾಗಿದ್ದರು.
ಸ್ಥಳಕ್ಕೆ ಸುಕೋ ಟೀಂ ಆಗಮಿಸಿ ಪರೀಕ್ಷೆಗಳನ್ನು ನಡೆಸಿತು. ಮನೆಯ ಮಾಲೀಕ ಅಬ್ದುಲ್ ಜಮಾದಾರ್ ನೀಡಿದ ಮಾಹಿತಿ ಪ್ರಕಾರ 5-6 ತಿಂಗಳ ಹಿಂದೆ ತಯ್ಯಾಬಾ ಸಹೋದರಿಗೆ ಬಾಡಿಗೆಗೆ ಮನೆ ನೀಡಿದ್ದರು. ಮನೆಗೆ ಸಮೀರ್ ಬಂದು ಹೋಗುತ್ತಿದ್ದು, ಯಾವುದೇ ಗದ್ದಲ ಗಲಾಟೆ ಮಾಡುತ್ತಿರಲಿಲ್ಲ. ಯಾರಿಗೂ ಗೊತ್ತಾಗದಂತೆ ಸಮೀರ್ ಬಂದು ಹೋಗುತ್ತಿದ್ದರಿಂದ ಬೆಳಿಗ್ಗೆ ಪೊಲೀಸರು ಮನೆಗೆ ಬಂದಾಗಲೇ ಕೊಲೆ ವಿಚಾರ ಅಕ್ಕಪಕ್ಕದವರಿಗೆ ಗೊತ್ತಾಗಿದೆ.
ಕಿರುಕುಳಕ್ಕೆ ಬೇಸತ್ತು ಕೊಲೆ
ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ರೌಡಿ ಶೀಟರ್ ಆಗಿದ್ದ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕಳೆದ ನಾಲ್ಕರು ವರ್ಷಗಳಿಂದ ಸಮೀರ್, ತಯ್ಯಾಬಾ ಜೊತೆಗೆ ಸಂಬಂಧ ಹೊಂದಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಸಮೀರ್ ಮನಸ್ತಾಪ ಮಾಡಿಕೊಂಡಿದ್ದ ಈ ವಿಚಾರವಾಗಿ ಆತನ ಮೇಲೆ ಹಲ್ಲೆಯೂ ಆಗಿತ್ತಂತೆ. ಕೆಲ ಕಾಲ ದೂರವಿದ್ದ ಇಬ್ಬರು ನಂತರ ಮತ್ತೆ ಒಂದಾಗಿದ್ದರು. ಬಳಿಕ ಸಮೀರ್ ತಯ್ಯಾಬಾಗೆ ಕಿರುಕುಳ ನೀಡುತ್ತಿದ್ದನಂತೆ. ಆತನ ಕಿರುಕುಳದಿಂದ ಬೇಸತ್ತು ಸಮೀರ್ನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ.
ಆಕೆಗೆ ಸಹೋದರ ಅಸ್ಲಮ್ ಸಹಾಯ ಮಾಡಿದ್ದಾನೆ. ನಿನ್ನೆ ರಾತ್ರಿ 8-30 ರ ಸುಮಾರಿಗೆ ಸಮೀರ್ ತಯ್ಯಾಬಾ ಬಳಿ ಬಂದಿದ್ದ. ರಾತ್ರಿ 11 ರಿಂದ 12 ಗಂಟೆ ವೇಳೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ನಂತರ ಸಮೀರ್ ಶವದೊಂದಿಗೆ ಬೆಳಕಾಗೋವರೆಗೂ ಕಾಯ್ದಿದ್ದಾರೆ. ಬೆಳಿಗ್ಗೆ 8 ಗಂಟೆ ನಂತರ ತಯ್ಯಾಬಾ ಗೋಲಗುಂಬಜ್ ಪೊಲೀಸ್ ಠಾಣೆಗೆ ತೆರಳಿ ಸಮೀರ್ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾಳೆ. ಆಗಲೇ ಹೊರ ಜಗತ್ತಿಗೆ ಸಮೀರ್ ಇನಾಂದದಾರ್ ಕೊಲೆಯಾಗಿರುವ ಮಾಹಿತಿ ಬಹಿರಂಗವಾಗಿದೆ.
