ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಅಂತ ಗಂಡನ ಮನೆಯ ಇಡೀ ಕುಟುಂಬಕ್ಕೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ಪತ್ನಿ ಪೊಲೀಸ್ ಬಲೆಗೆ ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆರಳೂರು ಗ್ರಾಮದ ನಿವಾಸಿ ಗಜೇಂದ್ರ ಹಾಗೂ ಅವರ ಕುಟುಂಬನ್ನು ಕೊಲ್ಲಯ ಯತ್ನಿಸಿದ ಚೈತ್ರಾ (33) ಬಂಧಿಸಲಾಗಿದೆ.
11 ವರ್ಷಗಳ ಹಿಂದೆ ಗಜೇಂದ್ರ ಹಾಗೂ ಚೈತ್ರಾ ಮದುವೆ ಆಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ.
ಇತ್ತೀಚಿನವರೆಗೂ ದಾಂಪತ್ಯ ಚೆನ್ನಾಗಿಯೇ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಈ ನಡುವೆಯೇ ಚೈತ್ರಾಳಿಗೆ ಪುನೀತ್ ಎಂಬಾತ ಪರಿಚಯವಾಗಿದ್ದು ಇಬ್ಬರಿಗೂ ಸಲುಗೆ ಬೆಳೆದಿತ್ತು.
ಪುನೀತ್ ಜೊತೆಗೆ ಚೈತ್ರಾ ಅನೈನಿಕ ಸಂಬಂಧದ ಬಗ್ಗೆ ಮಾಹಿತಿ ಪಡೆದ ಪತಿ ಗಜೇಂದ್ರ ಈ ವಿಚಾರವನ್ನು ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದೂ ಅಲ್ಲದೇ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿ ಸಮಸ್ಯೆ ಬಗೆ ಹರಿಸಿದ್ದರು.
ಅಕ್ರಮ ಸಂಬಂಧದ ರುಚಿ ಹತ್ತಿರವ ಚೈತ್ರಾ ಕೆಲವು ದಿನಗಳ ಹಿಂದೆ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಷಯ ಕುಟುಂಬದವರಿಗೆ ತಿಳಿದರೆ ಸಮಸ್ಯೆ ಆಗುತ್ತದೆ ಎಂದು ಗಂಡ, ಮಕ್ಕಳು, ಅತ್ತೆ-ಮಾವ ಅವರನ್ನು ಕೊಲ್ಲಲು ಸಂಚು ರೂಪಿಸಿದಳು.
ಪತಿ ಹಾಗೂ ಅವರ ಕುಟುಂಬದವರಿಗೆ ತಿಳಿಯದಂತೆ ಊಟ-ತಿಂಡಿಯಲ್ಲಿ ವಿಷದ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಪರಸಂಗ ಹೊಂದಿದ್ದ ಶಿವು ಸಹಕಾರ ನೀಡಿದ್ದ. ಈ ವಿಷಯ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಊಟ ಮಾಡುವ ಮುನ್ನ ಬಂದು ಆಹಾರವನ್ನು ವಶಕ್ಕೆ ಪಡೆದು ಚೈತ್ರಾಳನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚೈತ್ರಾಳ ವಿಚಾರಣೆ ಮುಂದುವರಿಸಿದ್ದಾರೆ.


