Sunday, June 14, 2026
Google search engine
Homeಬೆಂಗಳೂರುಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಮಂಡ್ಯ: 1999ರಲ್ಲಿ ಕೇವಲ ಮೂರು ಎಕರೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ ಆಸ್ತಿ 2018ರ ವೇಳೆಗೆ ₹1400 ಕೋಟಿ ಹೇಗಾಯಿತು? ಈ ಬಗ್ಗೆ ಅವರು ಇಡೀ ರಾಜ್ಯದ ಜನತೆಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

ಮಂಡ್ಯದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಉತ್ತರಿಸಿದ ಕೇಂದ್ರ ಸಚಿವರು; ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್ ಯೋಜನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ. 3 ಎಕರೆ ಇದ್ದ ಪಿತ್ರಾರ್ಜಿತ ಆಸ್ತಿ ₹1400 ಕೋಟಿ ಹೇಗಾಯಿತು? ಇದರ ಬಗ್ಗೆ ಅವರು ಹೇಳಬೇಕಲ್ಲವೇ? ಇಷ್ಟು ಪ್ರಮಾಣದಲ್ಲಿ ಆಸ್ತಿ ಹೇಗೆ ಸಂಪಾದನೆ ಮಾಡಬಹುದು? ಇಷ್ಟು ವೇಗವಾಗಿ ಹೇಗೆ ಶ್ರೀಮಂತರಾಗಬಹುದು ಎಂಬ ಬಗ್ಗೆ ರಾಜ್ಯದ ಜನತೆಗೆ ಹೇಳಲಿ. ಜನರಿಗೂ ಬಹಳ ಅನುಕೂಲ ಆಗುತ್ತದೆ ಎಂದು ಕಿಡಿಕಾರಿದರು.

ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜನರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ನೇರವಾಗಿ ಮುಖ್ಯಮಂತ್ರಿಗಳೇ ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳ ಜೊತೆ ಕೈ ಜೋಡಿಸಿ ಈ ದಂಧೆ ನಡಿಸುತ್ತಿದ್ದಾರೆ. ಬಹುಪಾಲು ರೈತರು ಭೂಮಿ ಕೊಡಲು ತಯಾರಿಲ್ಲ. ಪೊಲೀಸರು ಮತ್ತು ರೌಡಿಗಳನ್ನು ಬಿಟ್ಟು ರೈತರನ್ನು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಅಕ್ರೋಶ ವ್ಯಕ್ತಪಡಿಸಿದರು.

ಟೌನ್ ಶಿಪ್ ಯೋಜನೆಯನ್ನು ಮೋದಿ ಅವರು ಮೆಚ್ಚಿಚ್ಚಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಗುಜರಾತ್ ನಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಮತ್ತು ಟೌನ್ ಶಿಪ್ಗಳು ಬಂದಿದೆ ಎಂಬುದು ನಿಜ. ಆದರೆ ಅಲ್ಲಿ ರೈತರ ಕೃಷಿ ಭೂಮಿಯನ್ನು ಕಿತ್ತುಕೊಂಡು ಇಂತಹ ಯೋಜನೆಗಳನ್ನು ಮಾಡಿಲ್ಲ. ಒಣಭೂಮಿ ಮತ್ತು ನೀರಾವರಿಗೆ ಯೋಗ್ಯವಲ್ಲದ ಪ್ರದೇಶಗಳಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಬೇಕಿದ್ದರೆ ಇವರು ಹೋಗಿ ನೋಡಿಕೊಂಡು ಬರಲಿ ಎಂದು ಕೇಂದ್ರ ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಹಿಂದೆ ಬೆಂಗಳೂರು ಮತ್ತು ಮೈಸೂರು ನಡುವೆ ರಸ್ತೆ ಮಾಡಲು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಚಾಲನೆ ಸಿಕ್ಕಿತು. ಅವರು ಪ್ರಧಾನಿಯಾಗಿ ದೆಹಲಿಗೆ ಹೋದ ಕೂಡಲೇ ಮೆಲ್ಲಗೆ ಈ ಯೋಜನೆಯ ರೂಪವೇಷಗಳು ಬದಲಾಗುತ್ತ ಹೋದವು. ಆಮೇಲೆ ಬಿಎಂಐಸಿಎ ಎಂದು ಮಾಡಿಕೊಂಡು ಭೂಮಿಯನ್ನು ಲೂಟಿ ಮಾಡುವ ಕೆಲಸಕ್ಕೆ ಕೈ ಹಾಕಲಾಯಿತು. ಬಿಎಂಐಸಿಎ ಪ್ರಾಧಿಕಾರಕ್ಕೆ ಈಗಿನ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದರು. ಆಮೇಲೆ ಏನೇನು ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 1.75ಲಕ್ಷ ಎಕರೆ ರೈತರ ಭೂಮಿಯನ್ನು ರಸ್ತೆ ಮತ್ತು ಟೌನ್‌ಶಿಪ್ ನಿರ್ಮಾಣ ಮಾಡಲು ಸ್ವಾಧೀನ ಮಾಡಿಕೊಳ್ಳಲು ನೋಟಿಫಿಕೇಶನ್ ಹೊರಡಿಸಲಾಯಿತು. ಕಳೆದ 30 ವರ್ಷಗಳಲ್ಲಿ ಯೋಜನೆ ಏನೆಲ್ಲಾ ಆಯಿತು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಐದು ಟೌನ್ ಶಿಪ್ ಗಳನ್ನು ಮಾಡಿದಾಗ ಇದೇ ಕಾಂಗ್ರೆಸ್ ನವರು ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ನಡೆಸಿದರು. ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಸತ್ಯಶೋಧನ ಸಮಿತಿ ರಚಿಸಿ ಎಲ್ಲಾ ಕಡೆಗೂ ಹೋಗಿ ಸತ್ಯಶೋಧನೆ ಮಾಡಿದ್ದೇ ಮಾಡಿದ್ದು. ಅವರ ವರದಿ ಏನಾಯಿತು? ಆ ವರದಿಯಲ್ಲಿ ಏನಿದೆ? ಜನರು ಏನಂತ ಅಭಿಪ್ರಾಯ ಹೇಳಿದ್ದಾರೆ ಎಂಬುದನ್ನು ಜನರ ಮುಂದೆ ಇಡಲಿ. ಆಮೇಲೆ ಬಿಡದಿ ಯೋಜನೆ ಬಗ್ಗೆ ಮಾತಾಡಲಿ ಎಂದು ಸಚಿವ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ರಾಜ್ಯದ ಅನೇಕ ಕಡೆ ನೀರಾವರಿಗೆ ಮತ್ತು ಕೃಷಿಗೆ ಯೋಗ್ಯವಲ್ಲದ ಒಣಭೂಮಿ ಬೇಕಾದಷ್ಟು ಇದೆ. ಅಂತಹ ಕಡೆ ಹೋಗಿ ಇಂತಹ ಯೋಜನೆಗಳನ್ನು ಮಾಡಲಿ. ಬಿಡದಿ ಬಳಿ ಉತ್ತಮ ನೀರಾವರಿ ಸೌಲಭ್ಯ ಇದೆ. ಫಲವತ್ತಾದ ಭೂಮಿ ಇದೆ. ಪ್ರತಿ ತಿಂಗಳು 6 ಲಕ್ಷ ಲೀಟರ್ ಹಾಲು ಬೆಂಗಳೂರು ಡೇರಿಗೆ ಇಲ್ಲಿನ ರೈತರು ಹಾಕುತ್ತಾರೆ. ಇಂತಹ ಜಾಗದಲ್ಲಿ ಟೌನ್‌ಶಿಪ್ ಮಾಡಿ ಏನು ಸಾಧನೆ ಮಾಡುತ್ತಾರೆ ಇವರು? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ರೈತರ ಜಾಗವನ್ನು ವಶಪಡಿಸಿಕೊಳ್ಳುವುದಾಗಿ ಹೇಳಿ ಹುಡ್ಕೋ ಬ್ಯಾಂಕ್ ನಿಂದ ₹12,000 ಕೋಟಿ ಸಾಲ ಪಡೆಯಲು ಹೊರಟಿದ್ದಾರೆ. ರೈತರ ಹೆಸರಲ್ಲಿ ಸಾಲ ಪಡೆಯುತ್ತಿದ್ದಾರೆ. ಆದರೆ ರೈತರಿಗೆ ಇನ್ನೂ ಒಂದು ರೂಪಾಯಿ ತಲುಪಿಲ್ಲ. ಪಿಪಿಪಿ ಮಾಡಲ್‌ನಲ್ಲಿ ಟೌನ್‌ಶಿಪ್ ಮಾಡಲು ಮುಂದಾಗಿದ್ದಾರೆ. ಇದನ್ನು ಸರ್ಕಾರ ಅಭಿವೃದ್ಧಿ ಮಾಡಲ್ಲ. ರಿಯಲ್ ಎಸ್ಟೇಟ್ ಕುಳಗಳಿಗೆ ಜಾಗ ಕೊಡಲಾಗುತ್ತದೆ. ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಸಚಿವರು ದೂರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments