ಮಧ್ಯರಾತ್ರಿ ಜೋರಾಗಿ ಬೊಗಳಿದ ನಾಯಿಮರಿ ಗಾಢ ನಿದ್ರೆಯಲ್ಲಿದ್ದವರನ್ನು ಎಚ್ಚರಿಸಿ 67 ಜನರ ಪ್ರಾಣ ರಕ್ಷಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಜೂನ್ 30ರಂದು ಭಾರೀ ಮಳೆಯಾಗಿದ್ದರಿಂದ ಮೇಘಸ್ಫೋಟ ಸಂಭವಿಸಿತು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೇಘಸ್ಫೋಟ ಸಂಭವಿಸಿದ ವೇಳೆ ಸುಮಾರು 20 ಕುಟುಂಬದ 67 ಮಂದಿ ಗಾಢನಿದ್ದೆಯಲ್ಲಿದ್ದು .ಈ ವೇಳೆ ನಾಯಿ ಮರಿ ಜೋರಾಗಿ ಬೊಗಳಿದೆ. ಸಾಮಾನ್ಯವಾಗಿ ಬೊಗಳದ ನಾಯಿಮರಿ ಇಷ್ಟೊಂದು ಏಕೆ ಬೊಗಳುತ್ತಿದೆ ಎಂದು ಮನೆಯರು ಎದ್ದು ನೋಡಿದಾಗ ಜೋರಾದ ಮಳೆಗೆ ಮನೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದಾರೆ.
ಇದೇ ವೇಳೆ ಬಿರುಕುಬಿಟ್ಟ ಗೋಡೆಯಲ್ಲಿ ಸಣ್ಣದಾಗಿ ನೀರು ಸೋರಲು ಆರಂಭಿಸಿದಾಗ ಗಾಬರಿಗೊಂಡ ಮನೆಯ ಯಜಮಾನ ನರೇಂದ್ರ ಕೂಡಲೇ ಎಲ್ಲರನ್ನೂ ಎಚ್ಚರಿಸಿ ಮನೆಯಿಂದ ಹೊರಗೆ ಸುರಕ್ಷಿತ ಪ್ರದೇಶಕ್ಕೆ ಹೋಗುವಂತೆ ಸೂಚಿಸಿದ್ದಾರೆ.
ನರೇಂದ್ರ ಅವರು ನಂತರ ಸಮೀಪದಲ್ಲಿ ಇದ್ದ ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ ಮನೆಯಿಂದ ಹೊರ ಬಂದು ವಿಷಯ ತಿಳಿಸಿದ್ದಾರೆ. ಜೋರಾದ ಮಳೆಯ ನಡುವೆ ಗ್ರಾಮಸ್ಥರು ಮನೆ ತೊರೆದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಗ್ರಾಮಸ್ಥರು ಸುರಕ್ಷಿತ ಪ್ರದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಈ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು ಎಲ್ಲಾ ಮನೆಗಳು ನೆಲಸಮಗೊಂಡಿವೆ. ಇಡೀ ಗ್ರಾಮದಲ್ಲಿ ನಾಲ್ಕೈದು ಮನೆಗಳು ಮಾತ್ರ ಕಾಣಿಸುತ್ತಿದ್ದು ಉಳಿದವು ಕಣ್ಮರೆಯಾದವು.
ಬದುಕುಳಿದವರು ಕಳೆದ 7 ದಿನಗಳಿಂದ ತ್ರಿಯಂಬಲ ಗ್ರಾಮದಲ್ಲಿರುವ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನಾಯಿಮರಿ ಬೊಗಳಿದ್ದರಿಂದ ನಾವು ಎಚ್ಚರಗೊಂಡು ಸುರಕ್ಷಿತ ಪ್ರದೇಶ ತಲುಪಿ ಜೀವ ಉಳಿಸಿಕೊಂಡೆವು. ನಾಯಿಯಿಂದಾಗಿ 67 ಮಂದಿ ಪಾರಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.



