ದುಬಾರೆ ಆನೆ ಶಿಬಿರದ ಆನೆಗಳು ಚಾಮರಾಜನಗರ ಜಿಲ್ಲೆಯ ಕಲ್ಪುರ ಸುತ್ತಮುತ್ತ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೆ ಅಖಾಡಕ್ಕೆ ಇಳಿದಿವೆ.
ದುಬಾರೆ ಆನೆ ಶಿಬಿರದ ಸಾಕಾನೆಗಳಾದ ಶ್ರೀರಾಮ ಹಾಗೂ ಇಂದ್ರ ಎಂಬ ಆನೆಗಳು ಹುಲಿ ಸೆರೆ ಕಾರ್ಯಾಚರಣೆಗೆ ಇಳಿದಿವೆ.
ಎಸಿಎಫ್ ಮಂಜುನಾಥ್ ನೇತೃತ್ವದಲ್ಲಿ ಹುಲಿ ಸೆರೆ ಕೂಂಬಿಂಗ್ ನಡೆಸಲಾಗುತ್ತಿದೆ. ಜೊತೆಗೆ, ಹುಲಿ ಮೇಲೆ ನಿಗಾ ಇಡಲು ಕ್ಯಾಮರಾ ಹಾಗೂ ವಿಶೇಷ ಕೇಜ್ ಆದ ವಾಕ್ ಥ್ರೂ ಬೋನನ್ನು ಹುಲಿ ಸಂಚರಿಸಿದ್ದ ಸ್ಥಳಗಳಲ್ಲಿ ಇರಿಸಲಾಗಿದೆ.
ಹುಲಿ ಸೆರೆ ಕಾರ್ಯಾಚರಣೆ ವೇಳೆ ಯಾವುದೇ ಅಚಾತುರ್ಯ ಸಂಭವಿಸದೇ ಇರಲು ಮುನ್ನೆಚ್ಚರಿಕಾ ಕ್ರಮವಾಗಿ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕಲ್ಪುರ, ಹರವೆ, ಕಾಳನಹುಂಡಿ, ದೇಶಿಗೌಡನಪುರ, ಮೇಗಲಹುಂಡಿ, ಕಗ್ಗಳಿಪುರ, ಹಳೇಪುರ ನಂಜದೇವನಪುರ, ಕಸಬಾ ಹೋಬಳಿಯ ಹೆಗ್ಗೋಠಾರ, ಗ್ರಾಮಗಳಿಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ವ್ಯಾಪ್ತಿಯಲ್ಲಿ ಈ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
“ಅರಣ್ಯ ಇಲಾಖೆಯು ಕಳೆದ 20 ದಿನಗಳಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೃಷಿ ಚಟುವಟಿಕೆ ನಡೆಸಲು ಬಂದೋಬಸ್ತ್ ಒದಗಿಸಿ ಸಹಾಯ ಮಾಡಿದ್ದಾರೆ. ಹುಲಿ ಸೆರೆ ಸಿಕ್ಕರೆ ರೈತರ ಆತಂಕ ಇಲ್ಲವಾಗುತ್ತದೆ. ಹುಲಿ ಬಂದ ವಿಚಾರ ತಿಳಿದು 5-6 ದಿನ ಜಮೀನಿನತ್ತ ಮುಖ ಮಾಡಿರಲಿಲ್ಲ. ಕಾರ್ಯಾಚರಣೆ ಆರಂಭಗೊಂಡ ಬಳಿಕ ರೈತರು ಕೂಡ ಬೆಂಬಲ ಕೊಟ್ಟು ಅವರಿಗೆ ಯಾವುದೇ ತೊಂದರೆ ನೀಡಿಲ್ಲ ಎಂದು ರೈತ ಮಾದಪ್ಪ ಹುಲಿ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.



