ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಎರಡನೇ ದಿನದ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು, ಪ್ರಾಚೀನ ಕಾಲದ ಶಿಲೆ ಹಾಗೂ ಅಪರೂಪದ ವಸ್ತುಗಳು ಪತ್ತೆಯಾಗಿವೆ.
ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉತ್ಖನನ ನಡೆದಿದ್ದು, ಅಧಿಕಾರಿಗಳು ಸೇರಿದಂತೆ 33 ಮಂದಿ ಭಾಗಿಯಾಗಿದ್ದರು. ಉತ್ಖನನ ಜಾಗವನ್ನು ನಿರ್ಬಂಧಿತ ಪ್ರದೆಶ ಎಂದು ಘೋಷಿಸಲಾಗಿದ್ದು, ಒಂದು ವೇಳೆ ಭಾರೀ ಪ್ರಮಾಣದಲ್ಲಿ ಅಪರೂಪದ ವಸ್ತುಗಳು ಸಿಕ್ಕಿದರೆ ಇಡೀ ಗ್ರಾಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದುವರೆಗೆ ಪತ್ತೆಯಾದ ವಸ್ತುಗಳು ದೇವಸ್ಥಾನಕ್ಕೆ ಸಂಬಂಧಿಸಿದ ಕುರುಹು ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಶಿಲೆ ಪತ್ತೆಯಿಂದ ಸ್ಥಳೀಯರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ವಿರೋಧ ಮತ್ತು ನಿರ್ಬಂಧಗಳು: ಉತ್ಖನನಕ್ಕೆ ವೀರಭದ್ರೇಶ್ವರ ದೇವಸ್ಥಾನ ಜಾತ್ರಾ ಕಮಿಟಿ ಹಾಗೂ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಮುಂದಿನ ತಿಂಗಳು ನಡೆಯಲಿರುವ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ, ಉತ್ಖನನ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಿರುವುದರಿಂದ ಜಾತ್ರೆ ನಡೆಸುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಗದಗ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಸಿ.ಎನ್. ಶ್ರೀಧರ್ ಅವರು, ಪುರಾತತ್ವ ಇಲಾಖೆಯ ಶಿಫಾರಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಸಾರ್ವಜನಿಕರ ಪ್ರವೇಶ, ಛಾಯಾಚಿತ್ರ/ವಿಡಿಯೋ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ ಹೇರಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ಅಗ್ನಿಕುಂಡ ಹಾಕಲಾಗುತ್ತಿದೆ ಎಂಬ ಆರೋಪಗಳೊಂದಿಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಸರ್ಕಾರದ ಆದೇಶಗಳಿಂದಾಗಿ ಜಾತ್ರೆ ಮತ್ತು ದೈನಂದಿನ ಧಾರ್ಮಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿನ್ನೆಲೆ: ಈ ಉತ್ಖನನವು ಇತ್ತೀಚೆಗೆ ಮನೆ ನಿರ್ಮಾಣದ ಸಂದರ್ಭದಲ್ಲಿ ಪತ್ತೆಯಾದ ಚಿನ್ನಾಭರಣ ನಿಧಿಯ ಬೆನ್ನಲ್ಲೇ ಆರಂಭವಾಗಿದೆ. ಲಕ್ಕುಂಡಿ ಗ್ರಾಮವು ಕಲ್ಯಾಣ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಆಳ್ವಿಕೆಯ ಐತಿಹಾಸಿಕ ಸ್ಥಳವಾಗಿದ್ದು, ಅಪಾರ ಸಂಪತ್ತು ಹುದುಗಿರಬಹುದೆಂಬ ನಿರೀಕ್ಷೆಯಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಕಾರ್ಯಾಚರಣೆಯಾಗಿದ್ದು, ಹೆಚ್ಚಿನ ಐತಿಹಾಸಿಕ ಆಭರಣಗಳು, ಶಿಲ್ಪಗಳು ಸಿಗುವ ನಿರೀಕ್ಷೆ ಇದೆ. ಈ ಘಟನೆಯು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುತ್ತಿದ್ದರೂ, ಸ್ಥಳೀಯರಲ್ಲಿ ಆತಂಕ ಮತ್ತು ವಿರೋಧವು ಹೆಚ್ಚಾಗುತ್ತಿದೆ.
ಕೊರ್ಲಹಳ್ಳಿ ಗ್ರಾಮದಲ್ಲಿ ನಿಗೂಢ ಗೆಜ್ಜೆ ಶಬ್ಧ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಿಗೂಢ ಗೆಜ್ಜೆಯ ಶಬ್ಧ ಕೇಳಿಬರುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಈ ಗೆಜ್ಜೆ ಶಬ್ಧವು ದುರ್ಗಮ್ಮ ದೇವಿಯ ದೈವಿಕ ಲೀಲೆಯಾಗಿರಬಹುದೆಂಬ ನಂಬಿಕೆಯಿದೆ. ಕೆಲವು ದಿನಗಳ ಹಿಂದೆ ಗ್ರಾಮದ ದುರ್ಗಮ್ಮ ದೇವಿಯ ಮೂರ್ತಿ ಭಗ್ನಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರು ಹೊಸ ಮೂರ್ತಿಯನ್ನು ತಯಾರಿಸಿ, ಪ್ರತಿಷ್ಠಾಪನೆಗೆ ತಯಾರಿ ನಡೆಸುತ್ತಿದ್ದರು.
ಹೊಸ ಮೂರ್ತಿಯನ್ನು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇರಿಸಲಾಗಿತ್ತು. ಬಣ್ಣ ಹಚ್ಚುವುದು ಮಾತ್ರ ಬಾಕಿ ಇತ್ತು. ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡುವ ಯೋಜನೆ ಇತ್ತು. ಆದರೆ ಕಳೆದ ಎರಡ್ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಇಡೀ ಗ್ರಾಮದಾದ್ಯಂತ ಗೆಜ್ಜೆಯ ಶಬ್ಧ ಕೇಳಿಬರುತ್ತಿದೆ. ವಿಶೇಷವಾಗಿ ದೇವಿಯ ಮೂರ್ತಿ ಇರಿಸಿದ ಸ್ಥಳದಿಂದಲೇ ಈ ಶಬ್ಧ ಹೆಚ್ಚಾಗಿ ಕೇಳಿಬರುತ್ತಿದೆ ಎಂದು ಹೇಳುತ್ತಿದ್ದಾರೆ.



