ನವದೆಹಲಿ: ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಪರೀಕ್ಷಾ ಪೇ ಚರ್ಚಾದ ಒಂಬತ್ತನೇ ಆವೃತ್ತಿಯ ಭಾಗವಾಗಿ ತಮ್ಮ ನಿವಾಸದಲ್ಲಿ ಶುಕ್ರವಾರ ನಡೆದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಿಕ್ಷಣವು ಹೊರೆ ಎಂದು ಭಾವಿಸಬಾರದು. ಅದಕ್ಕೆ ನಮ್ಮ ಸಂಪೂರ್ಣ ಒಳಗೊಳ್ಳುವಿಕೆ ಅಗತ್ಯವಿದೆ. ಸಣ್ಣ ಸಣ್ಣ ಕಲಿಕೆಯು ನಿಮ್ಮ ಯಶಸ್ಸನ್ನು ಖಚಿತಪಡಿಸುವುದಿಲ್ಲ. ಅಂಕಗಳ ಮೇಲೆ ಕೇಂದ್ರೀಕರಿಸುವ ಬದಲು, ಪ್ರತಿಯೊಬ್ಬರೂ ಜೀವನದಲ್ಲಿ ನಾವು ಎಲ್ಲಿಗೆ ತಲುಪಬಹುದು ಎಂಬುದರ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಪೋಷಕರು, ಶಿಕ್ಷಕರು ಅಥವಾ ಗೆಳೆಯರು ಏನೇ ಹೇಳಿದರೂ, ನೀವು ನಿಮ್ಮದೇ ಯೋಜನೆ, ಮಾದರಿಯಲ್ಲಿ ನಂಬಿಕೆ ಇರಿಸಿ ಮತ್ತು ಅನುಸರಿಸಿ, ನಿಮಗೆ ಬರುವ ಎಲ್ಲಾ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಸ್ವಾತಂತ್ರ್ಯದ ಕನಸು ಕಂಡ ಗಾಂಧೀಜಿ
ಮಹಾತ್ಮ ಗಾಂಧಿ 1915ರಲ್ಲಿ ಆಫ್ರಿಕಾದಿಂದ ಹಿಂತಿರುಗಿ ಬಂದು ದೇಶದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು. 1915 ರಿಂದ 1947 ರವರೆಗೆ, ಅವರು ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ದುಡಿದರು. ಸ್ವಾತಂತ್ರ್ಯದ ಕನಸನ್ನು ಸ್ವಾತಂತ್ರ್ಯಕ್ಕೆ 30 ವರ್ಷಗಳ ಮೊದಲು ಕಂಡರು. ಸ್ವಾತಂತ್ರ್ಯಕ್ಕಾಗಿ ನಗು ನಗುತ್ತಲೇ ನೇಣುಗಂಬಕ್ಕೆ ಏರಿದವರು ಭಗತ್ ಸಿಂಗ್. ಹೀಗೆ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಹಾಗಾದರೆ ನಾವೇಕೆ ಸಾಮೂಹಿಕ ಪ್ರಯತ್ನಗಳ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬಾರದು ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಈ ಕನಸನ್ನು ನನಸಾಗುವಂತೆ ಮಾಡಲು ಯುವ ಮನಸ್ಸುಗಳಿಗೆ ಸ್ಪೂರ್ತಿ ತುಂಬಿದರು.



